
ನವದೆಹಲಿ: ವಕ್ಫ್‌ನ ಎಲ್ಲ ಆಸ್ತಿಗಳನ್ನು ಕಡ್ಡಾಯವಾಗಿ ಉಮೀದ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ನೀಡಿದ್ದ ಸಮಯವನ್ನು ವಿಸ್ತರಿಸುವಂತೆ ಕೋರಿ ಎಐಎಂಐಎಂ ವರಿಷ್ಠ ಅಸಾದುದ್ದೀನ್ ಒವೈಸಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಮತ್ತೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಗೆ ನೀಡಿದೆ.
ಒವೈಸಿ ಮತ್ತು ಇತರರ ಮನವಿಯನ್ನು ಆಲಿಸಲು ನ್ಯಾಯಪೀಠವು ಅ. 28ರಂದು ದಿನ ನಿಗದಿಪಡಿಸಿತ್ತು. ಆದರೆ ಅಂದು ವಿಚಾರಣೆ ನಡೆದಿರಲಿಲ್ಲ.
ಈ ಹಿಂದೆ ನಿಗದಿಯಾಗಿದ್ದ ದಿನದಂದು ಅರ್ಜಿದಾರರ ಮನವಿ ಆಲಿಸಲು ಸಾಧ್ಯವಾಗದ ಕಾರಣ, ತುರ್ತಾಗಿ ವಿಚಾರಣೆ ನಡೆಸುವಂತೆ ಒವೈಸಿ ಪರ ವಕೀಲ ನಿಜಾಮ್ ಪಾಷಾ ಅವರು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ವಿನೋದ್ ಚಂದ್ರನ್ ಅವರಿದ್ದ ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡರು.
ಮನವಿ ಪುರಸ್ಕರಿಸಿದ ಸಿಜೆಐ, ‘ನಾವು ದಿನಾಂಕ ನೀಡುತ್ತೇವೆ’ ಎಂದರು.
ಇದಕ್ಕೂ ಮುನ್ನ ವಕೀಲರು, ವಕ್ಫ್ ಆಸ್ತಿಗಳ ಕಡ್ಡಾಯ ನೋಂದಣಿಗೆ ನೀಡಿದ್ದ ಆರು ತಿಂಗಳ ಅವಧಿಯು ಮುಗಿಯುವ ಹಂತದಲ್ಲಿದೆ ಎಂಬುದನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.