ADVERTISEMENT

ಕೊನೆಯ ಹಂತದಲ್ಲಿ ಬಿಜೆಪಿಯನ್ನು ಕಾಡಿದ ಪ್ರತಿಮೆ ಧ್ವಂಸ

ಸೌಮ್ಯ ದಾಸ್
Published 27 ಮೇ 2019, 20:00 IST
Last Updated 27 ಮೇ 2019, 20:00 IST
   

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಮುನ್ನಡೆಯನ್ನು ತಡೆಯಲೇಬೇಕು ಎಂದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಟೊಂಕ ಕಟ್ಟಿ ನಿಂತಿತ್ತು. ಹಾಗಿದ್ದರೂ, ಲೋಕಸಭೆಗೆ ಮೊದಲ ಆರು ಹಂತಗಳಲ್ಲಿ ಮತದಾನ ನಡೆದ ಕ್ಷೇತ್ರಗಳಲ್ಲಿ ಬಿಜೆಪಿಗೆ ಗಮನಾರ್ಹ ಗೆಲುವು ಸಾಧ್ಯವಾಗಿದೆ. ಆದರೆ, ಕೊನೆಯ ಹಂತದಲ್ಲಿ ಮತದಾನ ನಡೆದ ಒಂಬತ್ತು ಕ್ಷೇತ್ರಗಳ ಪೈಕಿ ಒಂದರಲ್ಲಿಯೂ ಬಿಜೆಪಿ ಗೆದ್ದಿಲ್ಲ. ಕೋಲ್ಕತ್ತ ನಗರದ ಮೂರು ಕ್ಷೇತ್ರಗಳನ್ನು ಸೇರಿಸಿ ಎಲ್ಲ ಕ್ಷೇತ್ರಗಳಲ್ಲಿಯೂ ಟಿಎಂಸಿ ಗೆದ್ದಿದೆ.

ಸಮಾಜ ಸುಧಾರಕ ಮತ್ತು ಬಂಗಾಳ ಪುನರುತ್ಥಾನದ ಮೇರು ನಾಯಕ ಈಶ್ವರಚಂದ್ರ ವಿದ್ಯಾಸಾಗರ್‌ ಅವರ ಪ್ರತಿಮೆಯ ಧ್ವಂಸ ಪ್ರಕರಣವೇ ಕೊನೆಯ ಹಂತದಲ್ಲಿ ಬಿಜೆಪಿಯ ಹಿನ್ನಡೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಮೇ 14ರಂದು ಕೋಲ್ಕತ್ತದಲ್ಲಿ ರೋಡ್‌ ಷೋ ನಡೆಸಿದ ಸಂದರ್ಭದಲ್ಲಿ ಪ್ರತಿಮೆ ಧ್ವಂಸ ಮಾಡಲಾಗಿತ್ತು. ಪಶ್ಚಿಮ ಬಂಗಾಳದ ವಿದ್ಯಾವಂತ ಮತ್ತು ನಗರ ಪ್ರದೇಶದ ಜನರಲ್ಲಿ ಈ ಘಟನೆ ಆಕ್ರೋಶ ಉಂಟು ಮಾಡಿತ್ತು. ಇದಾಗಿ ನಾಲ್ಕು ದಿನಕ್ಕೆ ಮತದಾನ ಆಗಿತ್ತು.

ಈ ಘಟನೆಗೆ ಸಂಬಂಧಿಸಿ ಬಿಜೆಪಿ ಮತ್ತು ಟಿಎಂಸಿ ಪರಸ್ಪರ ದೂಷಿಸಿಕೊಂಡಿವೆ. ಆದರೆ, ಬಿಜೆಪಿಗೆ ಪಾಠ ಕಲಿಸಬೇಕು ಎಂದು ಪಶ್ಚಿಮ ಬಂಗಾಳದ ವಿದ್ಯಾವಂತ ವರ್ಗ ನಿರ್ಧರಿಸಿದಂತೆ ಕಾಣಿಸುತ್ತಿದೆ. ಕೋಲ್ಕತ್ತ ಉತ್ತರ, ದಕ್ಷಿಣ ಮತ್ತು ಜಾದವಪುರ ಲೋಕಸಭಾ ಕ್ಷೇತ್ರಗಳ ಫಲಿತಾಂಶದಲ್ಲಿಯೂ ಇದು ವ್ಯಕ್ತ.

ADVERTISEMENT

ವಿದ್ಯಾಸಾಗರರ ಪ್ರತಿಮೆ ಇದ್ದ ಕೋಲ್ಕತ್ತ ಉತ್ತರ ಕ್ಷೇತ್ರದ ಫಲಿತಾಂಶ ಗಮನಾರ್ಹ. 2009ರಿಂದ ಇಲ್ಲಿ ಸುದೀಪ್‌ ಬಂದೋಪಾಧ್ಯಾಯ ಗೆಲ್ಲುತ್ತಿದ್ದಾರೆ. ಈ ಬಾರಿಯೂ ಅವರೇ ಗೆದ್ದಿದ್ದಾರೆ. ಆದರೆ, 2014ರಲ್ಲಿ ಅವರು ಗಳಿಸಿದ ಮತಪ್ರಮಾಣ ಶೇ 36.30 ಇದ್ದರೆ, ಈ ಬಾರಿ ಅದು ಶೇ 49.96ಕ್ಕೆ ಏರಿದೆ. ವಿದ್ಯಾಸಾಗರರಿಗೆ ಸಂಬಂಧಿಸಿ ಬಂಗಾಳಿಗಳ ಭಾವನೆ ಎಷ್ಟೊಂದು ಪ್ರಬಲ ಎಂಬುದೂ ಈಗ ಸ್ಪಷ್ಟವಾಗಿದೆ. ಚಿಟ್‌ ಫಂಡ್‌ ಹಗರಣದಲ್ಲಿ ಸುದೀಪ್‌ ಅವರು ಭಾಗಿಯಾಗಿದ್ದಾರೆ ಎಂದು ಬಿಜೆಪಿ ಅಬ್ಬರದ ಪ್ರಚಾರ ಮಾಡಿದ್ದರೂ ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ.

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಪ್ರತಿಮೆ ಧ್ವಂಸ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಂಡರು. ಬಂಗಾಳಿ ಸಂಸ್ಕೃತಿಯ ಮೇಲೆ ಬಿಜೆಪಿ ಪ್ರಹಾರ ಮಾಡುತ್ತಿದೆ ಎಂದು ದೊಡ್ಡ ಧ್ವನಿಯಲ್ಲಿ ಕೂಗಿದರು. ಚುನಾವಣಾ ಆಯೋಗವು ಪ್ರಚಾರದ ಅವಧಿಯನ್ನು ಕಡಿತಗೊಳಿಸಿದರೂ ಸಿಕ್ಕ ಎರಡು ದಿನದ ಅವಧಿಯಲ್ಲಿ ಹೇಳಬೇಕಾದುದೆಲ್ಲವನ್ನೂ ಮಮತಾ ಹೇಳಿದ್ದರು. ಅದು ದೊಡ್ಡ ಪ್ರತಿಫಲವನ್ನೇ ಅವರಿಗೆ ತಂದು ಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.