ADVERTISEMENT

ಪಶ್ಚಿಮ ಬಂಗಾಳ: 8ನೇ ತರಗತಿ ವಿದ್ಯಾರ್ಹತೆಯ ಹುದ್ದೆಗೆ ಪದವೀಧರರಿಂದ ಅರ್ಜಿ

ಪಿಟಿಐ
Published 11 ಅಕ್ಟೋಬರ್ 2020, 9:17 IST
Last Updated 11 ಅಕ್ಟೋಬರ್ 2020, 9:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಾಲ್ಡಾ: ಪಶ್ಚಿಮ ಬಂಗಾಳದಲ್ಲಿ ‘ವನ ಸಹಾಯಕ’ ಹುದ್ದೆಗಳಿಗೆ ಪಿಎಚ್‌.ಡಿ ಪದವೀಧರರು,ಸ್ನಾತಕೋತ್ತರ ಪದವೀಧರರು, ಎಂಜಿನಿಯರಿಂಗ್‌ ಪದವೀಧರರೂ ಅರ್ಜಿ ಸಲ್ಲಿಸಿದ್ದಾರೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ 8ನೇ ತರಗತಿ ಉತ್ತೀರ್ಣರಾಗಿರಬೇಕು. ಆದರೆ ಎರಡು, ಮೂರು ಪದವಿಗಳನ್ನು ಪಡೆದಿರುವವರೂ ಅರ್ಜಿ ಸಲ್ಲಿಸಿದ್ದಾರೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.

ಪಶ್ಚಿಮ ಬಂಗಾಳ ಸರ್ಕಾರವುವನ್ಯಜೀವಿಗಳ ರಕ್ಷಣೆ ಮತ್ತು ಮನುಷ್ಯರು ಹಾಗೂ ಪ್ರಾಣಿಗಳ ಸಂಘರ್ಷ ನಿಯಂತ್ರಣಕ್ಕಾಗಿ 2,000 ‘ವನ ಸಹಾಯಕ’ರನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಿದೆ.

ADVERTISEMENT

‘ಉನ್ನತ ಶಿಕ್ಷಣ ಪಡೆದಿರುವ ಅನೇಕರು ಈ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದಾರೆ’ ಎಂದು ಮಾಲ್ಡಾ ಅರಣ್ಯ ವಿಭಾಗದ ವಲಯ‌ ಅಧಿಕಾರಿ ಸುಭೀರ್‌ ಕುಮಾರ್‌ ಗುಹಾ ನಿಯೋಗಿ ತಿಳಿಸಿದರು.

‘ಕೋವಿಡ್‌ನ ಈ ಪರಿಸ್ಥಿತಿಯಲ್ಲಿ ನನಗೆ ಸರ್ಕಾರಿ ಹುದ್ದೆಯೇ ಮೊದಲ ಆದ್ಯತೆ. ಅದು ಕಡಿಮೆ ವಿದ್ಯಾ ಅರ್ಹತೆಯ ಹುದ್ದೆಯಾದರೂ ಪರವಾಗಿಲ್ಲ’ ಎಂದು ಅರಣ್ಯ ಸಹಾಯಕನ ಹುದ್ದೆಗೆ ಅರ್ಜಿ ಸಲ್ಲಿಸಿದ ಇತಿಹಾಸ ವಿಷಯದ ಸ್ನಾತಕೋತರ ಪದವೀಧರ ಸುದೀಪ್‌ ಮೊಹಿತ್ರಾ ಅವರು ಹೇಳಿದರು.

‘ಮಾರುಕಟ್ಟೆಯಲ್ಲಿ ಉದ್ಯೋಗಗಳ ಕೊರತೆಯಿದೆ. ಈ ಪರಿಸ್ಥಿತಿಯಲ್ಲಿ ಹೆಚ್ಚಿನ ಖಾಸಗಿ ಸಂಸ್ಥೆಗಳು ಮುಚ್ಚುತ್ತಿವೆ. ಖಾಸಗಿ ಕಂಪನಿಗಳ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಖಾಸಗಿ ಸಂಸ್ಥೆಗಳು ಹೊಸ ನೇಮಕಾತಿಗಳನ್ನು ಮಾಡುತ್ತಿಲ್ಲ. ಹೀಗಾಗಿ ಎಂತಹ ಸರ್ಕಾರಿ ಹುದ್ದೆಯಾದರೂ ನಾನು ಸ್ವೀಕರಿಸುತ್ತೇನೆ’ ಎಂದು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.