ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ತಿರುವನಂತಪುರ: ಕೊಟ್ಟಾಯಂ ವೈದ್ಯಕೀಯ ಕಾಲೇಜಿನ ಕಟ್ಟಡ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆಗೆ ಹೊಣೆ ಹೊತ್ತು, ಆರೋಗ್ಯ ಸಚಿವೆ ವೀಣಾ ಜಾರ್ಜ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನೇೃತ್ವದ ಯುಡಿಎಫ್‌ನ ಮಿತ್ರ ಪಕ್ಷಗಳು ಮತ್ತು ಬಿಜೆಪಿಯ ವಿವಿಧ ವಿಭಾಗಗಳಿಂದ ರಾಜ್ಯವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ.
ರಾಜಧಾನಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ವೀಣಾ ಜಾರ್ಜ್ ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು, ಪೊಲೀಸರು ಜಲಫಿರಂಗಿಗಳನ್ನು ಬಳಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಪತ್ತನಂತಿಟ್ಟದಲ್ಲಿ, ಬಿಜೆಪಿ ಕಾರ್ಯಕರ್ತರು ಆರೋಗ್ಯ ಸಚಿವರ ಕುಟುಂಬದ ನಿವಾಸಕ್ಕೆ ಮೆರವಣಿಗೆ ನಡೆಸಿ, ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕೆಡವಲು ಪ್ರಯತ್ನಿಸಿದರು.
ಯುವ ಕಾಂಗ್ರೆಸ್, ಕೇರಳ ವಿದ್ಯಾರ್ಥಿ ಸಂಘ (ಕೆಎಸ್‌ಯು), ಮಹಿಳಾ ಕಾಂಗ್ರೆಸ್, ಯೂತ್ ಲೀಗ್ ಮತ್ತು ಬಿಜೆಪಿ ರಾಜ್ಯ ರಾಜ್ಯಧಾನಿ ಮತ್ತು ಪಾಲಕ್ಕಾಡ್, ಕೊಚ್ಚಿ, ಕೊಲ್ಲಂ ಮತ್ತು ಮಾನಂತವಾಡಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಪ್ರತಿಭಟನೆ ನಡೆಸಿವೆ. ಪ್ರತಿಭಟನಾಕಾರರು ಹಲವೆಡೆ ಜಿಲ್ಲಾಧಿಕಾರಿ ಅಥವಾ ಜಿಲ್ಲಾ ವೈದ್ಯಾಧಿಕಾರಿ (ಡಿಎಂಒ) ಕಚೇರಿಗಳಿಗೆ ಮೆರವಣಿಗೆ ನಡೆಸಿ ವೀಣಾ ಅವರ ರಾಜೀನಾಮೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಕೊಟ್ಟಾಯಂ ಸರ್ಕಾರಿ ವೈದ್ಯಕೀಯ ಕಾಲೇಜಿನ ಶೌಚಾಲಯ ಸಂಕೀರ್ಣ ಗುರುವಾರ ಕುಸಿದು ಬಿದ್ದು, ಒಬ್ಬ ಮಹಿಳೆ ಸಾವನ್ನಪ್ಪಿದ್ದರು. ಈ ವೇಳೆ ಬಾಲಕಿ ಸೇರಿ ಮೂವರು ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಹೊಸದಾಗಿ ನಿರ್ಮಿಸಲಾದ ಶಸ್ತ್ರಚಿಕಿತ್ಸಾ ಬ್ಲಾಕ್‌ಗೆ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿದ್ದಾಗಲೇ ಈ ದುರಂತ ಸಂಭವಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.