ADVERTISEMENT

ಲಖಿಂಪುರ ಖೇರಿ: ಮಿಶ್ರಾ ವಿರುದ್ಧ ‘ಸುಪ್ರೀಂ’ ಮೊರೆ ಹೋಗಲು ಟಿಕಾಯತ್ ನಿರ್ಧಾರ

ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ

ಪಿಟಿಐ
Published 15 ಫೆಬ್ರುವರಿ 2022, 13:55 IST
Last Updated 15 ಫೆಬ್ರುವರಿ 2022, 13:55 IST
ರಾಕೇಶ್ ಟಿಕಾಯತ್
ರಾಕೇಶ್ ಟಿಕಾಯತ್   

ಲಖಿಂಪುರ ಖೇರಿ: ನಾಲ್ವರು ರೈತರು ಸೇರಿದಂತೆ ಎಂಟು ಜನರ ಸಾವಿಗೆ ಕಾರಣವಾದ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸುಪ್ರೀಂ ಕೋರ್ಟ್ ಮೊರೆ ಹೋಗಲಿದೆ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಮಂಗಳವಾರ ಹೇಳಿದ್ದಾರೆ.

ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

‘ಇಡೀ ದೇಶ ಮತ್ತು ಜಗತ್ತು ಅತ್ಯಂತ ಕುಖ್ಯಾತ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣವನ್ನು ವೀಕ್ಷಿಸಿದೆ. ಆಶಿಶ್ ಮಿಶ್ರಾ ಅವರು ಘೋರ ಅಪರಾಧ ಮಾಡಿದರೂ ಮೂರು ತಿಂಗಳೊಳಗೆ ಜಾಮೀನು ಪಡೆಯುತ್ತಾರೆ. ಅವರು ಜೈಲಿನಿಂದ ಹೊರಬರುವುದನ್ನು ಎಲ್ಲರೂ ನೋಡುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಕೆಎಂ ಸುಪ್ರೀಂ ಕೋರ್ಟ್ ಮೊರೆಹೋಗಲಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

‘ಹಾಗಾದರೆ ನಮಗೆ ಇಂತಹ ಸರ್ವಾಧಿಕಾರಿ ಸರ್ಕಾರ ಬೇಕೇ ಅಥವಾ ವಾಹನ ನುಗ್ಗಿಸಿ ಜನರನ್ನು ಸಾಯಿಸುವವರು ಮೂರೇ ತಿಂಗಳೊಳಗೆ ಜೈಲಿನಿಂದ ಹೊರಬರುವ ಈ ವ್ಯವಸ್ಥೆ ಬೇಕೇ ಎಂದು ಪ್ರಶ್ನಿಸಿದ ಟಿಕಾಯತ್, ಇಂಥವರು ಮುಂದಿನ ದಿನಗಳಲ್ಲಿ ಸಾರ್ವಜನಿಕರೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದು ಮುಖ್ಯ. ಇವು ನಮ್ಮ ಸಮಸ್ಯೆಗಳು. ಇದನ್ನು ಜನರು ಅರ್ಥಮಾಡಿಕೊಳ್ಳಬೇಕಿದೆ’ ಎಂದರು.

‘ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಆನ್‌ಲೈನ್‌ನಲ್ಲಿ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ ತನ್ನ ವಿಷಯ ಪ್ರಸ್ತಾಪಿಸಿದಾಗ ವಿದ್ಯುತ್ ವ್ಯತ್ಯಯ ಉಂಟಾಯಿತು. ಹಾಗಾಗಿ, ನ್ಯಾಯಾಲಯದ ಮುಂದೆ ಸಂಪೂರ್ಣ ವಿಷಯವನ್ನು ಪ್ರಸ್ತುತಪಡಿಸಲು ಸಾಧ್ಯವಾಗಲಿಲ್ಲ’ ಎಂದರು.

ರೈತರು ಮತ್ತು ಯುವ ಸಮುದಾಯಕ್ಕೆ ಸಂಬಂಧಿಸಿ ವಿಷಯಗಳ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಉತ್ತರಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಬಿಜೆಪಿಯು ಅಭಿವೃದ್ಧಿಗಾಗಿ ಕೆಲಸ ಮಾಡುವ ಬದಲು ಕೋಮುವಾದದ ವಿಷಯಗಳ ಆಧಾರದ ಮೇಲೆ ಚುನಾವಣೆಗಳನ್ನು ಎದುರಿಸುತ್ತಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.