ನವದೆಹಲಿ: ಹೈದರಾಬಾದ್ ವಿಶ್ವವಿದ್ಯಾಲಯದ ಪಕ್ಕದಲ್ಲಿ ಹೆಚ್ಚಿನ ಸಂಖ್ಯೆಯ ಮರಗಳನ್ನು ಕಡಿಯುವುದರಿಂದ ಅಲ್ಲಿನ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಬುಧವಾರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ‘ಇಂತಹ ಕಾರ್ಯಗಳಿಂದ ಪರಿಸರ ಸಂರಕ್ಷಣೆ ಹೇಗಾಗುತ್ತದೆ?’ ಎಂದು ಕೇಳಿದೆ.
‘ತೆಲಂಗಾಣ ಸರ್ಕಾರವು ಅಲ್ಲಿನ ಮರಗಳನ್ನು ಕಡಿಯಲು ಏಕೆ ಆತುರ ಪಡುತ್ತಿದೆ’ ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠ ಪ್ರಶ್ನಿಸಿತು.
‘ಅಲ್ಲಿನ 100 ಎಕರೆ ಭೂಮಿಯನ್ನು ನೀವು ಹೇಗೆ ಪುನರ್ ಸ್ಥಾಪಿಸುತ್ತೀರಿ ಎಂಬುದರ ಕುರಿತು ಯೋಜನೆ ರೂಪಿಸಿ ಸಲ್ಲಿಸಿ’ ಎಂದು ಪೀಠವು, ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರಿಗೆ ಸೂಚಿಸಿತು.
‘ಅಲ್ಲಿನ ಪ್ರಾಣಿಗಳು ಆಶ್ರಯಕ್ಕಾಗಿ ಓಡುತ್ತಿರುವ ವಿಡಿಯೊಗಳನ್ನು ನೋಡಿ ಬೇಸರವಾಯಿತು’ ಎಂದ ಪೀಠವು, ಅವುಗಳ ರಕ್ಷಣೆಗೆ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಿರ್ದೇಶಿಸಿತು.
ಈ ಕುರಿತ ವಿಚಾರಣೆಯನ್ನು ಮೇ 15ಕ್ಕೆ ಮುಂದೂಡಿದ ಪೀಠವು, ‘ಅಲ್ಲಿಯ ತನಕ ಒಂದೇ ಒಂದು ಮರವನ್ನು ಕಡಿಯಬಾರದು’ ಎಂದು ಮೌಖಿಕವಾಗಿ ತಿಳಿಸಿತು.
ಕಾಂಚ ಗಚಿಬೌಲಿ ಅರಣ್ಯ ಪ್ರದೇಶದಲ್ಲಿನ ಮರಗಳ ಮಾರಣ ಹೋಮ ಕುರಿತು ಏಪ್ರಿಲ್ 3ರಂದು ಸ್ವಯಂ ಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಇದು ಅತ್ಯಂತ ಗಂಭೀರ ವಿಷಯವಾಗಿದೆ ಎಂದು ಹೇಳಿತ್ತು.
ಹೈದರಾಬಾದ್ ವಿಶ್ವವಿದ್ಯಾಲಯದ ಪಕ್ಕದ 400 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸುವ ತೆಲಂಗಾಣ ಸರ್ಕಾರದ ಯೋಜನೆಯನ್ನು ವಿರೋಧಿಸಿ ವಿ.ವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.