ADVERTISEMENT

ಅಧಿವೇಶನದಲ್ಲಿ ಪೂರ್ಣ ಚರ್ಚೆಗೆ ಮೋದಿ ಒಪ್ಪುವರೇ..?: ಕಾಂಗ್ರೆಸ್‌

ದೇಶದ ಭದ್ರತೆ, ವಿದೇಶಾಂಗ ನೀತಿ ಸವಾಲುಗಳ ಚರ್ಚೆಗೆ ಆಗ್ರಹ

ಪಿಟಿಐ
Published 11 ಜೂನ್ 2025, 16:11 IST
Last Updated 11 ಜೂನ್ 2025, 16:11 IST
ಜೈರಾಮ್ ರಮೇಶ್‌, ಕಾಂಗ್ರೆಸ್ ನಾಯಕ
ಜೈರಾಮ್ ರಮೇಶ್‌, ಕಾಂಗ್ರೆಸ್ ನಾಯಕ   

ನವದೆಹಲಿ: ವಿದೇಶಗಳಿಗೆ ಭೇಟಿ ನೀಡಿದ್ದ ಸಂಸದರ ನಿಯೋಗದೊಂದಿಗೆ ಚರ್ಚೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಹಲ್ಗಾಮ್‌ ದಾಳಿ ನಂತರ ದೇಶದ ಭದ್ರತೆ ಮತ್ತು ವಿದೇಶಾಂಗ ನೀತಿಗೆ ಎದುರಾಗಿರುವ ಸವಾಲುಗಳ ಬಗ್ಗೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪೂರ್ಣ ಪ್ರಮಾಣದ ಚರ್ಚೆಗೆ ಒಪ್ಪಿಕೊಳ್ಳುವರೇ ಎಂದು ಕಾಂಗ್ರೆಸ್‌ ಬುಧವಾರ ಪ್ರಶ್ನಿಸಿದೆ.

ಚೀನಾ ಮತ್ತು ಪಾಕಿಸ್ತಾನ ರಾಷ್ಟ್ರಗಳಿಗೆ ಎದುರು–ಬದುರಾಗಿ ಭಾರತ ಕೈಗೊಳ್ಳಬಹುದಾದ ಭವಿಷ್ಯದ ರಣತಂತ್ರಗಳ ಬಗ್ಗೆ ಸರ್ವ ಪಕ್ಷಗಳ ಸಭೆಯಲ್ಲಿ ಚರ್ಚಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಳ್ಳಲಿದ್ದಾರೆಯೇ ಎಂದು ವಿರೋಧ ಪಕ್ಷ ಕಾಂಗ್ರೆಸ್‌ ಕೇಳಿದೆ.

ಭಯೋತ್ಪಾದನೆ ಬಗೆಗಿನ ಭಾರತದ ಶೂನ್ಯ ಸಹಿಷ್ಣು ನೀತಿ ಮತ್ತು ಪಾಕಿಸ್ತಾನದ ಪ್ರಚೋದನೆ ಬಗ್ಗೆ ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಟ್ಟು ವಾಪಸ್ ಆಗಿರುವ ಸರ್ವಪಕ್ಷಗಳ ಸಂಸದರು ಮತ್ತು ವಿದೇಶಾಂಗ ಇಲಾಖೆಯ ಮಾಜಿ ಅಧಿಕಾರಿಗಳ ಜತೆ ಮಂಗಳವಾರ ಪ್ರಧಾನಿ ಮೋದಿ ಸಮಾಲೋಚಿಸಿದ್ದರು.

ADVERTISEMENT

ಈ ಬಗ್ಗೆ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌, ‘ಸಂಸದರ ನಿಯೋಗಗಳ ಜತೆ ಪ್ರಧಾನಿ ಖುದ್ದು ಚರ್ಚಿಸಿದ್ದಾರೆ. ಈಗಲಾದರೂ ಸರ್ವಪಕ್ಷಗಳ ನಾಯಕರ ಸಭೆ ಕರೆದು ಪಾಕಿಸ್ತಾನ ಮತ್ತು ಚೀನಾ ಎದುರು ಭವಿಷ್ಯದ ರಣತಂತ್ರ, ಅವುಗಳ ಪರಿಣಾಮ ಮತ್ತು ಆಪರೇಷನ್‌ ಸಿಂಧೂರ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸೇನಾಪಡೆಗಳ ಮುಖ್ಯಸ್ಥ (ಸಿಡಿಎಸ್‌) ಜನರಲ್ ಅನಿಲ್ ಚೌಹಾಣ್‌ ಅವರು ಸಿಂಗಪುರದಲ್ಲಿ ಬಹಿರಂಗಪಡಿಸಿದ್ದ ಸಂಗತಿಗಳ ಕುರಿತು ಚರ್ಚಿಸುವರೇ’ ಎಂದು ಪ್ರಶ್ನಿಸಿದ್ದಾರೆ.

‘ಪಾಕಿಸ್ತಾನದ ಜೊತೆಗಿನ ಸಂಘರ್ಷ ಸಂದರ್ಭದಲ್ಲಿ ಯುದ್ಧ ವಿಮಾನಗಳನ್ನು ಕಳೆದುಕೊಂಡ ನಂತರ ನಮ್ಮ ತಂತ್ರಗಾರಿಕೆಯನ್ನು ಸರಿಪಡಿಸಿಕೊಂಡು ಆ ದೇಶದ ಒಳನುಗ್ಗಿ ದಾಳಿ ಮಾಡಿದೆವು’ ಎಂದು ಅನಿಲ್‌ ಚೌಹಾಣ್‌ ಸಿಂಗಪುರದಲ್ಲಿ ಹೇಳಿದ್ದರು.

ಪ್ರಧಾನಿಗೆ ಕಾಂಗ್ರೆಸ್ ಪ್ರಶ್ನೆಗಳು

  • ಪಹಲ್ಗಾಮ್‌ ದಾಳಿಯ ಉಗ್ರರನ್ನು ಹಿಡಿದು ತರುತ್ತೀರಾ?

  • ಕಾರ್ಗಿಲ್‌ ಪರಿಶೀಲನಾ ಸಮಿತಿಯಂತೆ ‘ಆಪರೇಷನ್ ಸಿಂಧೂರ’ ಸಮಿತಿ ರಚಿಸುವಿರಾ?

  • ಭವಿಷ್ಯದ ಯುದ್ಧ ಕಾರ್ಯತಂತ್ರಗಳ ಬಗ್ಗೆ ಸಮಿತಿಯ ಶಿಫಾರಸು ಪಡೆಯುವಿರಾ?

  • ಸಂಘರ್ಷ ನಿಲ್ಲಿಸಿದೆ ಎನ್ನುವ ಡೊನಾಲ್ಡ್‌ ಟ್ರಂಪ್ ಹೇಳಿಕೆಯನ್ನು ಒಪ್ಪಿಕೊಳ್ಳುವಿರಾ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.