ADVERTISEMENT

ಠಾಣೆಯಲ್ಲೇ ಮಹಿಳೆಗೆ ಅವಮಾನ

ಪೊಲೀಸ್‌ ಅಧಿಕಾರಿ ಅಮಾನತು: ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 19:51 IST
Last Updated 25 ಜುಲೈ 2019, 19:51 IST

ಲಖನೌ: ಲೈಂಗಿಕ ಕಿರುಕುಳದ ವಿರುದ್ಧ ದೂರು ನೀಡಲು ಬಂದ ಮಹಿಳೆಯೊಬ್ಬರನ್ನು ಪೊಲೀಸರೇ ಅವಮಾನಿಸಿದ ಘಟನೆ ಕಾನ್ಪುರದಲ್ಲಿ ನಡೆದಿದೆ.

ಆಭರಣಗಳನ್ನು ಧರಿಸಿದ್ದ ಕಾನ್ಪುರ ನಗರದ ಮಹಿಳೆಯೊಬ್ಬರು ಠಾಣೆಗೆ ಹೋದಾಗ ಪೊಲೀಸ್‌ ಅಧಿಕಾರಿ ತಾರ್‌ ಬಾಬು ಎನ್ನುವವರು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಜತೆಗೆ, ದೂರಿನ ಪ್ರತಿಯನ್ನು ಹರಿದು ಹಾಕಿ ಅಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ.

‘ನೀನು ಐದು ಉಂಗುರುಗಳನ್ನು ಧರಿಸಿದ್ದೀಯಾ. ಜತೆಗೆ, ಎರಡು ಬ್ರೆಸೆಲೆಟ್‌ಗಳಿವೆ. ನೀನು ಧರಿಸಿರುವ ಆಭರಣಗಳೇ ಯಾವ ರೀತಿಯ ಮಹಿಳೆ ಎನ್ನುವುದನ್ನು ತೋರಿಸುತ್ತದೆ’ ಎಂದು ಹೀಯಾಳಿಸಿದ್ದಾರೆ.

ADVERTISEMENT

ಸಾಮಾಜಿಕ ಜಾಲತಾಣಗಳಲ್ಲಿ ಈ ಮಹಿಳೆಯನ್ನು ಅವಮಾನಿಸಿರುವ ದೃಶ್ಯಗಳು ಹರಿದಾಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಪೊಲೀಸ್‌ ಅಧಿಕಾರಿಯನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದೆ.

‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ನೈಜವಾಗಿದ್ದರೆ ‍ಪೊಲೀಸರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಇಂತಹ ನಡವಳಿಕೆಯನ್ನು ಸಹಿಸುವುದಿಲ್ಲ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಮಹಿಳೆಯು ದೂರು ನೀಡಿರುವ ಮೂವರು ಯುವಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.