ADVERTISEMENT

ಗಂಡನನ್ನು ಕೊಂದು ಶವದ ಪಕ್ಕದಲ್ಲೇ ರಾತ್ರಿ ಇಡೀ ಮಲಗಿದ್ದ ಹೆಂಡತಿ

ಐಎಎನ್ಎಸ್
Published 20 ಡಿಸೆಂಬರ್ 2022, 12:59 IST
Last Updated 20 ಡಿಸೆಂಬರ್ 2022, 12:59 IST
   

ಲಖನೌ: ಹೆಂಡತಿಯೊಬ್ಬಳು ಗಂಡನನ್ನು ಕೊಂದು ಬಳಿಕ ಮೃತದೇಹದ ಪಕ್ಕದಲ್ಲೇ ರಾತ್ರಿ ಇಡೀ ಮಲಗಿದ್ದ ವಿಲಕ್ಷಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ರಾಯ್ ಬರೇಲಿ ಜಿಲ್ಲೆಯ ಬಚ್ರಾವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಸಹಗೊ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಮೃತ ಅತುಲ್ ಸಹ್ಗೊ ಮದ್ಯವ್ಯಸನಿಯಾಗಿದ್ದು, ಮದುವೆ ಮತ್ತು ಇತರ ಸಮಾರಂಭಗಳಲ್ಲಿ ಸಿಹಿ ವಿತರಿಸುವ ಕೆಲಸ ಮಾಡುತ್ತಿದ್ದ. ಆತ ತನ್ನ ಹೆಂಡತಿ ಅನ್ನು ಮತ್ತು ಇಬ್ಬರು ಮಕ್ಕಳ ಜೊತೆ ವಾಸವಿದ್ದ.

ADVERTISEMENT

ಗಂಡನನ್ನು ಕೊಂದಿರುವ ಅನು, ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಕುಡಿದು ಮನೆಗೆ ಬಂದ ಅತುಲ್, ಅನು ಜೊತೆ ಜಗಳ ಆರಂಭಿಸಿದ್ದಾನೆ. ಅಲ್ಲದೆ, ಆಕೆಯನ್ನು ತೀವ್ರವಾಗಿ ಥಳಿಸಿದ್ದಾನೆ. ಈ ವೇಳೆ ಅನು ಕಲ್ಲಿನಿಂದ ಆತನ ತಲೆಗೆ ಹೊಡೆದಿದ್ದಾಳೆ. ಪ್ರಜ್ಞೆ ತಪ್ಪಿದ ಗಂಡನ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದಾಳೆ. ಬಳಿಕ, ರಾತ್ರಿ ಇಡೀ ಶವದ ಪಕ್ಕದಲ್ಲೇ ಮಲಗಿದ್ದಾಳೆ. ಬೆಳಿಗ್ಗೆ ತಂದೆಯನ್ನು ಎಬ್ಬಿಸಬೇಡಿ ಎಂದು ಮಕ್ಕಳಿಗೆ ಹೇಳಿ ಬ್ಯೂಟಿ ಪಾರ್ಲರ್‌ಗೆ ತೆರಳಿ ದಿನವಿಡೀ ಕೆಲಸ ಮಾಡಿ ಮನೆಗೆ ಬಂದಿದ್ದಾಳೆ. ರಾತ್ರಿ ಮನೆಯವರಿಗೆಲ್ಲ ಅಡುಗೆ ಮಾಡಿ, ಮಕ್ಕಳಿಗೆ ಊಟ ಮಾಡಿಸಿ ಮಲಗಿದ್ದಾಳೆ. ಬಳಿಕ, ಒಬ್ಬಳೆ ಶವವನ್ನು ಎಳೆದುಕೊಂಡು ಹೋಗಿ ಗೇಟ್ ಬಳಿ ಬಿಟ್ಟಿದ್ದಾಳೆ. ಬಳಿಕ ಕೊಠಡಿಗೆ ತೆರಳಿ ಮಲಗಿದ್ದಾಳೆ. ಬೆಳಿಗ್ಗೆ ಅಲರಾಂ ಇಟ್ಟುಕೊಂಡು ಬೇಗನೆ ಎದ್ದು, ಗಂಡ ಕುಡಿದು ಮೃತಪಟ್ಟಿರುವುದಾಗಿ ಕಥೆ ಕಟ್ಟಿದ್ದಾಳೆ.

ಬೆಳಗ್ಗೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪರೀಕ್ಷೆಯಲ್ಲಿ ಕುತ್ತಿಗೆ ಬಿಗಿದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಅನುಮಾನಗೊಂಡ ಪೊಲೀಸರು ಹೆಂಡತಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಸತ್ಯ ಹೊರಬಿದ್ದಿದೆ. ಅನು ಅವರನ್ನು ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.