ಕೊಲೆ (ಸಾಂದರ್ಭಿಕ ಚಿತ್ರ)
ನವದೆಹಲಿ: ದೆಹಲಿಯ ಶಹದಾರದಲ್ಲಿರುವ ಫ್ಲಾಟ್‌ನಲ್ಲಿ ಮಹಿಳೆಯ ಕೊಳೆತ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಫ್ಲಾಟ್ ಮಾಲೀಕ 60 ವರ್ಷದ ವಿವೇಕಾನಂದ ಮಿಶ್ರಾ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಜಿಲ್ಮಿಲ್ ಕಾಲೋನಿಯಲ್ಲಿರುವ ಫ್ಲಾಟ್‌ನಲ್ಲಿ ದುರ್ವಾಸನೆ ಬರುತ್ತಿದೆ ಎಂದು ಸ್ಥಳೀಯರು ವಿವೇಕ್ ವಿಹಾರ್ ಪೊಲೀಸ್ ಠಾಣೆಗೆ ಕರೆ ಮಾಡಿದ್ದರು. ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಮಹಿಳೆಯ ಮೃತದೇಹ ಚೀಲದೊಳಗೆ ಪತ್ತೆಯಾಗಿದೆ. ಮೃತದೇಹವನ್ನು ಕಂಬಳಿಯಿಂದ ಸುತ್ತಿಡಲಾಗಿತ್ತು’ ಎಂದು ಶಹದಾರದ ಉಪ ಪೊಲೀಸ್ ಆಯುಕ್ತ ಪ್ರಶಾಂತ್ ಗೌತಮ್ ತಿಳಿಸಿದ್ದಾರೆ.
‘ಮೃತದೇಹವಿದ್ದ ಚೀಲವನ್ನು ಪೆಟ್ಟಿಗೆಯೊಳಗೆ ಇಟ್ಟು ಮಂಚದ ಕೆಳಗೆ ಅಡಗಿಸಿಡಲಾಗಿತ್ತು. ಅದರ ಮೇಲೆ ಧೂಪದ ಕಡ್ಡಿಯನ್ನು ಇಡಲಾಗಿದೆ. ಎರಡು ಮೂರು ದಿನಗಳ ಹಿಂದೆ ಕೊಲೆ ನಡೆದಿರುವ ಸಾಧ್ಯತೆ ಇದೆ’ ಎಂದು ಅವರು ಹೇಳಿದ್ದಾರೆ.
ವಿವೇಕಾನಂದ ಮಿಶ್ರಾ ಅವರು ಗುರುವಾರ ರಾತ್ರಿ ಮತ್ತು ಶುಕ್ರವಾರ ಮಧ್ಯಾಹ್ನ ಫ್ಲಾಟ್‌ಗೆ ಭೇಟಿ ನೀಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಈಚೆಗೆ ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿ ಪತಿ ಪರಾರಿ ಆಗಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿಯಲ್ಲಿ ನಡೆದಿತ್ತು.
ಘಟನೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಹಾರಾಷ್ಟ್ರದ ಗೌರಿ ಅನಿಲ್ ಸಾಂಬೆಕರ್ (32) ಕೊಲೆಯಾದವರು. ಪತಿ ರಾಕೇಶ್ ಪರಾರಿಯಾಗಿದ್ದು, ಆತನ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೊಡ್ಡ ಕಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರ ಬಳಿಯ ಮನೆಯಲ್ಲಿ ಆರೋಪಿ ಕೃತ್ಯ ಎಸಗಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.