ADVERTISEMENT

ಶಬರಿಮಲೆಗೆ ಮಹಿಳೆಯರ ಪ್ರವೇಶ ತಡೆಯಲಾಗದು, ಪೂಜೆಗಿಲ್ಲ ಲಿಂಗ ಭೇದ : ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 18 ಜುಲೈ 2018, 20:08 IST
Last Updated 18 ಜುಲೈ 2018, 20:08 IST
   

ನವದೆಹಲಿ: ಗಂಡಸರ ಹಾಗೆಯೇ ಹೆಂಗಸರಿಗೆ ಕೂಡ ಯಾವುದೇ ದೇವಾಲಯಕ್ಕೆ ಪ್ರವೇಶಿಸುವ ಮತ್ತು ಅಲ್ಲಿ ಪೂಜೆ ಮಾಡುವ ಸಾಂವಿಧಾನಿಕ ಹಕ್ಕು ಇದೆ. ಇಲ್ಲಿ ಲಿಂಗಾಧರಿತವಾದ ಯಾವುದೇ ತಾರತಮ್ಯಕ್ಕೆ ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಪ್ರವೇಶ ನಿಷೇಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಪೀಠ ಹೀಗೆ ಅಭಿ‍ಪ್ರಾಯಪಟ್ಟಿದೆ.

ದೇವಸ್ಥಾನಕ್ಕೆ ಪ್ರವೇಶಿಸುವುದು ಕಾನೂನಿನ ಮೇಲೆ ಅವಲಂಬಿತವಾದ ವಿಚಾರ ಅಲ್ಲ. ಅದು ಸಾಂವಿಧಾನಿಕ ಹಕ್ಕು ಎಂದು ಪೀಠವು ಸ್ಪಷ್ಟವಾಗಿ ಹೇಳಿದೆ.

ADVERTISEMENT

‘ಮಹಿಳೆಯರಿಗೆ ಪ್ರವೇಶ ನಿಷೇಧ ಹೇರಿರುವುದು ಮೂಲಭೂತ ಹಕ್ಕಿನ ಉಲ್ಲಂಘನೆ. ಅಸ್ಪೃಶ್ಯತೆಯನ್ನು ನಿಷೇಧಿಸುವ ಸಂವಿಧಾನದ 17ನೇ ವಿಧಿಯ ಅನ್ವಯವೂ ಇದು ತಪ್ಪು. ಋತುಸ್ರಾವದ ಕಾರಣಕ್ಕೆ ಮಹಿಳೆಯರನ್ನು ತಾರತಮ್ಯದಿಂದ ನೋಡಲಾಗಿದೆ’ ಎಂದು ‘ಹ್ಯಾಪಿ ಟು ಬ್ಲೀಡ್‌’ ಅಭಿಯಾನದ ಪರವಾಗಿ ವಾದಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಹೇಳಿದರು.

‘ನಿಷೇಧದ ಅಧಿಸೂಚನೆಯಲ್ಲಿ ಋತುಸ್ರಾವದ ಪ್ರಸ್ತಾವ ಇಲ್ಲ. ನಿಗದಿ ಮಾಡಲಾದ ವಯಸ್ಸು ಋತುಸ್ರಾವದ ಆಧಾರದಲ್ಲಿ ಆಗಿದ್ದರೆ ಅದು ಸಾಂವಿಧಾನಿಕ ನೈತಿಕತೆಯ ಉಲ್ಲಂಘನೆ’ ಎಂದು ಪೀಠ ಪ್ರತಿಕ್ರಿಯೆ ನೀಡಿತು.

ಶಬರಿಮಲೆಗೆ ಮಹಿಳೆಯರ ಪ್ರವೇಶ ನಿಷೇಧಿಸಿರುವುದನ್ನು ಪ್ರಶ್ನಿಸಿ ಇಂಡಿಯನ್‌ ಯಂಗ್‌ ಲಾಯರ್ಸ್‌ ಅಸೋಸಿಯೇಷನ್‌ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ಕಳೆದ ಅಕ್ಟೋಬರ್‌ 13ರಂದು ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಗಿತ್ತು. ಮಹಿಳೆಯರಿಗೆ ಪ್ರವೇಶ ನಿಷೇಧವು ಲಿಂಗ ತಾರತಮ್ಯವೇ ಮತ್ತು ಮೂಲಭೂತ ಹಕ್ಕಿನ ಉಲ್ಲಂಘನೆಯೇ ಎಂಬ ಪ್ರಶ್ನೆಗಳಿಗೆ ಸಂವಿಧಾನ ಪೀಠವು ಉತ್ತರ ಕಂಡುಕೊಳ್ಳಬೇಕಿದೆ.

ವಿಚಾರಣೆ ಗುರುವಾರವೂ ಮುಂದುವರಿಯಲಿದೆ.

***

ಗಂಡಿಗೊಬ್ಬ ದೇವರು, ಹೆಣ್ಣಿಗೊಬ್ಬ ದೇವರು ಎಂಬ ಭೇದ ಎಲ್ಲಿಯೂ ಇಲ್ಲ. ದೇವರು ಎಲ್ಲರಿಗೂ ಒಂದೇ. ಸಂವಿಧಾನ ನಮ್ಮ ರಕ್ಷಣೆಗೆ ಇದ್ದೇ ಇರುತ್ತದೆ ಎಂಬ ನಂಬಿಕೆ ಇತ್ತು. ಅದೀಗ ಮತ್ತೆ ನಿಜವಾಗಿದೆ. ದೇವರಂತೆ ಅದು ನಮ್ಮ ನೆರವಿಗೆ ಬಂದಿದೆ. ಎಲ್ಲ ಮಹಿಳೆಯರು ಸಂಭ್ರಮಿಸುವ ಕ್ಷಣವಿದು

–ಜಯಮಾಲಾ, ಸಚಿವೆ

***

ಶತಮಾನಗಳಿಂದ ವಿಧಿ–ನಿಷೇಧಗಳೆಲ್ಲ ಮಹಿಳೆಗೆ ಮಾತ್ರ ಮೀಸಲಾಗಿವೆ. ಮುಟ್ಟು ಒಂದು ಶಾಪದಂತೆ ಪ್ರತಿಬಿಂಬಿಸಲಾಗುತ್ತಿದೆ. ಆದರೆ, ಇಡೀ ಸೃಷ್ಟಿಕ್ರಿಯೆ ನಿಂತಿರುವುದೇ ಅದರ ಮೇಲೆ. ಮಹಿಳೆಯರ ಸುತ್ತಲಿನ ಮಿತ್‌ಗಳನ್ನು ಒಡೆಯಲು ನಮಗೀಗ ಕಾನೂನಿನ ರಕ್ಷಣೆ ಸಿಕ್ಕಿದೆ. ಇಂತಹ ಬೆಂಬಲ ಪಡೆಯಬೇಕಾಗಿ ಬಂದಿರುವುದು ದುರಂತ. ನಮಗೆ ದೇವಾಲಯ ಪ್ರವೇಶದ ಅವಕಾಶ ಮುಕ್ತವಾಗಿರಲಿ. ಬೇಕೆನಿಸಿದರೆ ಹೋಗುತ್ತೇವೆ

–ಪಿ.ಚಂದ್ರಿಕಾ, ಲೇಖಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.