ADVERTISEMENT

ಮಣಿಪುರಕ್ಕೆ ತೆರಳಿದ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲೀವಾಲ್‌ 

ಪಿಟಿಐ
Published 23 ಜುಲೈ 2023, 6:33 IST
Last Updated 23 ಜುಲೈ 2023, 6:33 IST
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲೀವಾಲ್
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲೀವಾಲ್   

ನವದೆಹಲಿ: ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯದ ನಡುವಣ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರಕ್ಕೆ ಭಾನುವಾರ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲೀವಾಲ್‌ ಭೇಟಿ ನೀಡಿದ್ದಾರೆ.

ನಗ್ನ ಮೆರವಣಿಗೆ ಪ್ರಕರಣದ ಸಂತ್ರಸ್ತೆಯರ ಭೇಟಿಗೆ ನಿರ್ಧರಿಸಿದ್ದ ಸ್ವಾತಿ ಅವರಿಗೆ ಸುರಕ್ಷತೆಯ ನೆಪವೊಡ್ಡಿ ಮಣಿಪುರ ರಾಜ್ಯ ಸರ್ಕಾರವು ಅನುಮತಿ ನೀಡಲು ನಿರಾಕರಿಸಿತ್ತು.  ಸರ್ಕಾರದ ಈ ನಡೆಗೆ ಅವರು ಬಹಿರಂ‌ಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಅವರು ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌ ಅವರಿಗೆ ಪತ್ರ ಬರೆದಿದ್ದರು. ಸರ್ಕಾರದ ಹಗ್ಗಜಗ್ಗಾಟದ ನಡುವೆ ಕೊನೆಗೂ ಆಯೋಗದ ತಂಡವು ಸಂಘರ್ಷ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಅನುಮತಿ ಸಿಕ್ಕಿದೆ.

‘ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ನನ್ನ ಭೇಟಿಗೆ ಸರ್ಕಾರ ಅನುಮತಿ ನಿರಾಕರಿಸಿದ್ದು ನಿಜ. ಈ ಬಗ್ಗೆ ಚರ್ಚಿಸಿದ ಬಳಿಕ ಇಂಫಾಲ್‌ಗೆ ತೆರಳುತ್ತಿದ್ದೇನೆ. ಬಿರೆನ್‌ ಸಿಂಗ್ ಜೊತೆಗೆ ಚರ್ಚಿಸಿ ಅವರೊಟ್ಟಿಗೆಯೇ ಇಬ್ಬರು ಸಂತ್ರಸ್ತೆಯರನ್ನು ಭೇಟಿ ಮಾಡುತ್ತೇನೆ’ ಎಂದು ಸ್ವಾತಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಪತ್ರದಲ್ಲಿ ಏನಿದೆ?: ‘ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಸಹಿಸಲಾರದೆ ಹಲವು ಮಹಿಳೆಯರು ಸುರಕ್ಷತೆ ದೃಷ್ಟಿಯಿಂದ ದೆಹಲಿಗೆ ತಪ್ಪಿಸಿಕೊಂಡು ಬಂದಿದ್ದಾರೆ. ಅವರ ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ನಿಮ್ಮೊಂದಿಗೆ ಚರ್ಚಿಸಬೇಕಿದೆ. ಇದಕ್ಕೆ ಅವಕಾಶ ನೀಡಬೇಕು’ ಎಂದು ಬಿರೇನ್‌ ಸಿಂಗ್‌ ಅವರಿಗೆ ಬರೆದಿರುವ ಪತ್ರವನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ನನ್ನ ಪ್ರವಾಸದಿಂದ ರಾಜ್ಯದಲ್ಲಿ ಯಾವುದೇ ಸಮಸ್ಯೆ ಸೃಷ್ಟಿಸುವುದಿಲ್ಲ. ಆಯೋಗದ ತಂಡಕ್ಕೆ ಅಗತ್ಯವಿರುವ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಬೇಕು. ಪರಿಹಾರ ಶಿಬಿರಗಳಿಗೆ ಭೇಟಿ ನೀಡಲು ನೆರವು ನೀಡಬೇಕು’ ಎಂದು ಕೋರಿದ್ದಾರೆ.

ಸ್ವಾತಿ ಅವರು ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದರು. ಅಲ್ಲದೇ, ಇಂಫಾಲ್‌ನ ಜಿಲ್ಲಾಧಿಕಾರಿಗೂ ಈ ಪ್ರತಿ ಕಳುಹಿಸಿದ್ದರು. ಅದನ್ನು ಅವರು ಗೃಹ ಇಲಾಖೆಯ ಜಂಟಿ ನಿರ್ದೇಶಕರಿಗೆ ಕಳುಹಿಸಿದ್ದರು. ತಕ್ಷಣವೇ ಇಮೇಲ್‌ ಮೂಲಕ ಪ್ರತಿಕ್ರಿಯಿಸಿದ್ದ ಗೃಹ ಇಲಾಖೆಯು, ಸುರಕ್ಷತೆ ದೃಷ್ಟಿಯಿಂದ ಪ್ರವಾಸ ಮುಂದೂಡುವಂತೆ ಕೋರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.