ADVERTISEMENT

ಅವಳಿ ಮಕ್ಕಳಿರುವ ಮಹಿಳೆಯರಿಗೆ ಎರಡನೇ ಪ್ರಸವಕ್ಕೆ ರಜೆ ಇಲ್ಲ: ಮದ್ರಾಸ್ ಹೈಕೋರ್ಟ್‌

ಪಿಟಿಐ
Published 4 ಮಾರ್ಚ್ 2020, 18:40 IST
Last Updated 4 ಮಾರ್ಚ್ 2020, 18:40 IST
   

ಚೆನ್ನೈ: ‘ಮೊದಲ ಪ್ರಸವದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಉದ್ಯೋಗಸ್ಥ ಮಹಿಳೆಯರಿಗೆ ಎರಡನೇ ಬಾರಿಗೆ ಪ್ರಸವ ರಜೆ ಹಾಗೂ ಇತರೆ ಸೌಲಭ್ಯಗಳು ಅನ್ವಯವಾಗುವುದಿಲ್ಲ’ ಎಂದು ಮದ್ರಾಸ್ ಹೈಕೋರ್ಟ್‌ ಪ್ರಕರಣವೊಂದರ ಆದೇಶದಲ್ಲಿ ಉಲ್ಲೇಖಿಸಿದೆ.

‘ಪ್ರಸ್ತುತ ಇರುವ ನಿಯಮಗಳ ಅನುಸಾರ, ಉದ್ಯೋಗಸ್ಥ ಮಹಿಳೆಯರು ಎರಡು ಬಾರಿ ಮಾತ್ರ ಹೆರಿಗೆ ಸೌಲಭ್ಯಗಳನ್ನು ಪಡೆಯಬಹುದು. ಅವಳಿ ಮಕ್ಕಳು ಜನಿಸಿದಾಗ, ಅವುಗಳ ಜನನ ಅವಧಿ ನಡುವೆ ಅಂತರ ಇರುತ್ತದೆ. ಈ ಸಮಯದ ಅಂತರದ ಆಧಾರದ ಮೇಲೆ ಅವುಗಳಲ್ಲಿ ಯಾವ ಶಿಶು ಹಿರಿಯದು ಎಂದು ಸಹ ನಿರ್ಧಾರವಾಗುತ್ತದೆ. ಹಾಗಾಗಿ ಇದನ್ನು ಪ್ರತ್ಯೇಕವಾಗಿ ಎರಡು ಹೆರಿಗೆ ಎಂದೇ ಪರಿಗಣಿಸಲಾಗುತ್ತದೆ’ ಎಂದು ನ್ಯಾಯಾಲಯ ಹೇಳಿದೆ.

ಕೇಂದ್ರ ಕೈಗಾರಿಕಾ ರಕ್ಷಣಾ ಪಡೆ (ಸಿಐಎಸ್‌ಎಫ್) ಮಹಿಳಾ ಸದಸ್ಯೆಯೊಬ್ಬರಿಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯ ಈ ಅಂಶ ಉಲ್ಲೇಖಿಸಿದೆ.

ADVERTISEMENT

ಇದೇ ಪ್ರಕರಣದಲ್ಲಿ 2019ರ ಜೂನ್ 18ರಂದು ನ್ಯಾಯಾಲಯದ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು, ಮುಖ್ಯ ನ್ಯಾಯಮೂರ್ತಿ ಎ.ಪಿ. ಸಾಹಿ ಹಾಗೂ ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಅವರ ಪೀಠ ತಳ್ಳಿಹಾಕಿತು.

ತಮಿಳುನಾಡು ಸರ್ಕಾರದ 2018ರ ನಿಯಮಾವಳಿ ಪ್ರಕಾರ ಮೊದಲ ಪ್ರಸವದಲ್ಲಿ ಅವಳಿ ಮಕ್ಕಳು ಜನಿಸಿದ್ದರೂ, ಎರಡನೇ ಬಾರಿಗೂ ಹೆರಿಗೆ ರಜೆ ದೊರಕುತ್ತದೆ. ಇದರ ಆಧಾರದಲ್ಲಿ ಏಕಸದಸ್ಯ ಪೀಠ ಮಹಿಳೆಗೆ 180 ದಿನಗಳ ರಜೆ ನೀಡಿತ್ತು.

ಈ ಕುರಿತು ಮೇಲ್ಮನವಿ ಸಲ್ಲಿಸಿದ್ದ ಕೇಂದ್ರ ಗೃಹಸಚಿವಾಲಯ, ‘ಕೇಂದ್ರ ನಾಗರಿಕ ಸೇವಾ (ರಜೆ) ನಿಯಮಗಳ ಅನುಸಾರ ಮಾತ್ರ ಹೆರಿಗೆ ಸೌಲಭ್ಯಗಳನ್ನು ನೀಡಲಾಗುವುದು. ಈ ಮಹಿಳೆಗೆ ತಮಿಳುನಾಡಿನ ಹೆರಿಗೆ ಸೌಲಭ್ಯ ನಿಯಮಗಳು ಅನ್ವಯವಾಗುವುದಿಲ್ಲ’ ಎಂದು ಹೇಳಿತ್ತು.

ಇದನ್ನು ಪರಿಗಣಿಸಿದ ಪೀಠ, ‘ಈ ಪ್ರಕರಣದಲ್ಲಿ ಮಹಿಳೆ ಎರಡನೇ ಬಾರಿ ಮಗುವಿಗೆ ಜನ್ಮ ನೀಡಿದರೂ, ಲೆಕ್ಕದ ಪ್ರಕಾರ ಮೂರನೇ ಮಗು ಜನಿಸಿದೆ. ಆದ್ದರಿಂದ ಮಹಿಳೆ ಎರಡನೇ ಬಾರಿಗೆ ಹೆರಿಗೆ ಸೌಲಭ್ಯಗಳನ್ನು ಪಡೆಯಲು ಅರ್ಹರಲ್ಲ. ಏಕಸದಸ್ಯ ಪೀಠ ಈ ವಾಸ್ತವಾಂಶವನ್ನು ಪರಿಗಣಿಸದೇ ತೀರ್ಪು ನೀಡಿತ್ತು’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.