ADVERTISEMENT

ಅಂಗವಿಕಲರಿಗಾಗಿ ಚೈನ್‌ರಹಿತ ಸೈಕಲ್

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 19:30 IST
Last Updated 20 ಜೂನ್ 2012, 19:30 IST
ಅಂಗವಿಕಲರಿಗಾಗಿ ಚೈನ್‌ರಹಿತ ಸೈಕಲ್
ಅಂಗವಿಕಲರಿಗಾಗಿ ಚೈನ್‌ರಹಿತ ಸೈಕಲ್   

ಧಾರವಾಡ: ಇಲ್ಲಿಯವರೆಗೆ ಅಂಗವಿಕಲರು ಚೈನ್ ಇದ್ದ ತ್ರಿಚಕ್ರ ಸೈಕಲ್‌ಗಳನ್ನು ಬಳಸುತ್ತಿದ್ದರು. ಆದರೆ, ಚೈನ್ ಇಲ್ಲದೆ ಕೇವಲ ಸ್ಟೇರಿಂಗ್‌ನಿಂದ ಚಕ್ರಕ್ಕೆ ಸಂಪರ್ಕ ಕಲ್ಪಿಸಿದ ರಾಡ್‌ನಿಂದಲೇ ಚಲಿಸುವ ತ್ರಿಚಕ್ರ ಸೈಕಲ್ ಅನ್ನು ಇಲ್ಲಿಯ ಎಸ್‌ಡಿಎಂ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮೂವರು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

ಕಾಲೇಜಿನ 8ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಆನಂದ ಕಡಿಯವರ, ರವಿರಾಜ ಜಾಧವ, ಚೇತನ್ ಗೌರಿಕರ ಅವರು ವಿಭಾಗದ ಪ್ರಾಧ್ಯಾಪಕ ಪ್ರೊ.ಎಸ್.ಜಿ.ಬಿಂದಗಿ ಮಾರ್ಗದರ್ಶನದಲ್ಲಿ ಈ ತ್ರಿಚಕ್ರ ವಾಹನವನ್ನು ತಮ್ಮ `ಪ್ರಾಜೆಕ್ಟ್~ಗಾಗಿ ಅಭಿವೃದ್ಧಿಪಡಿಸಿದ್ದಾರೆ.

ಇಲ್ಲಿ ಸ್ಟೇರಿಂಗ್ ಬರೀ ಎಡಕ್ಕೆ ಬಲಕ್ಕೆ ಚಲಿಸುವ ಕೆಲಸವನ್ನಷ್ಟೇ ಮಾಡುವುದಿಲ್ಲ. ಮುಂದಕ್ಕೆ ಹಾಗೂ ಹಿಂದಕ್ಕೆ ಚಲಿಸಲೂ ಬಳಕೆಯಾಗುತ್ತದೆ. ಅಂದರೆ ಚೈನ್ ಮಾಡುತ್ತಿದ್ದ ಕೆಲಸವನ್ನು ಈ ಸ್ಟೇರಿಂಗ್ ಮಾಡುತ್ತದೆ. ಹೇಗೆಂದರೆ ಸ್ಟೇರಿಂಗ್ ಒಂದು ಸಾರಿ `ಮುಂದಕ್ಕೆ ಹಿಂದಕ್ಕೆ~ ಜಗ್ಗಿದರೆ, ಅದಕ್ಕೆ ಸಂಪರ್ಕ ಕಲ್ಪಿಸಿದ ರಾಡ್ ಒಂದು ಸುತ್ತು ಸುತ್ತುತ್ತದೆ. ಅದರಿಂದ ಚಕ್ರಗಳು ಮುಂದಕ್ಕೆ ಚಲಿಸುತ್ತವೆ.

ಇದೇ ಸ್ಟೇರಿಂಗ್ ಅನ್ನು ಬಳಸಿ ಹಿಂದಕ್ಕೆ (ರಿವರ್ಸ್) ಚಲಿಸಬಹುದಾಗಿದೆ. ಬಲಬದಿಯ ಚಕ್ರಕ್ಕೆ ಬ್ರೇಕ್ ಅಳವಡಿಸಲಾಗಿದೆ.

ಮುಂದಿನ ಚಕ್ರದ ಗಾತ್ರ 65 ಸೆಂ.ಮೀ. ಇದ್ದರೆ, ಹಿಂದಿನ ಚಕ್ರಗಳು 70 ಸೆಂ.ಮೀ. ಗಾತ್ರ ಹೊಂದಿವೆ.
ಚೈನ್ ಹೊಂದಿದ ತ್ರಿಚಕ್ರ ಸೈಕಲ್ ಗಂಟೆಗೆ ಮೂರರಿಂದ ನಾಲ್ಕು ಕಿ.ಮೀ. ವೇಗದಲ್ಲಿ ಚಲಿಸಿದರೆ, ಈ ಸೈಕಲ್ ಐದರಿಂದ ಎಂಟು ಕಿ.ಮೀ. ಚಲಿಸುತ್ತದೆ ಎಂದು ಹೇಳುತ್ತಾರೆ ವಿಭಾಗದ ಮುಖ್ಯಸ್ಥ ಪ್ರೊ.ವಿ.ಕೆ.ಹೆಬ್ಳೀಕರ್.

ಈ ಮಾದರಿಯು ಈ ವರ್ಷದ ಅತ್ಯುತ್ತಮ ಮಾದರಿ ಎಂದು ಕಾಲೇಜಿನಲ್ಲಿ ಆಯ್ಕೆಯಾಗಿದೆ ಎಂದು ಅನ್ವೇಷಕ ವಿದ್ಯಾರ್ಥಿ ಆನಂದ ಕಡಿಯವರ ಹೇಳಿದರು. ಈ ತ್ರಿಚಕ್ರ ತಯಾರಿಕೆಗೆ ಎಂಟು ಸಾವಿರ ರೂ ವೆಚ್ಚವಾಗಿದ್ದು, ವಾಣಿಜ್ಯ ಉದ್ದೇಶಗಳಿಗೆ ತಯಾರಿಸಲು ಆರಂಭಿಸಿದರೆ ಐದು ಸಾವಿರ ತಗುಲಬಹುದು ಎಂದು ಅಂದಾಜು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.