ADVERTISEMENT

ಅಂಗವಿಕಲರ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ

ರಾಜ್ಯ ಸರ್ಕಾರದ ವಿರುದ್ಧ ಅಧಿನಿಯಮ ಆಯುಕ್ತರ ಕಿಡಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 19:59 IST
Last Updated 1 ಆಗಸ್ಟ್ 2013, 19:59 IST

ಬೆಂಗಳೂರು:  `ಅಂಗವಿಕಲರ ಅಭಿವೃದ್ಧಿ ವಿಷಯವಾಗಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿದ್ದು, ಸಚಿವಾಲಯದಿಂದ ಅಗತ್ಯವಾದ ಯಾವ ಸಹಕಾರವೂ ಸಿಗುತ್ತಿಲ್ಲ' ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮ ರಾಜ್ಯ ಆಯುಕ್ತ ಕೆ.ವಿ. ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. `ಅಧಿನಿಯಮ ಜಾರಿಗೆ ಬಂದು ಆರು ವರ್ಷಗಳ ಬಳಿಕ `ಸಿ' ಮತ್ತು `ಡಿ' ವರ್ಗದ ಕೆಲವು ಹುದ್ದೆಗಳನ್ನು ಮಾತ್ರ ಗುರುತಿಸಲಾಗಿದ್ದು, ಕೇಂದ್ರ ಸರ್ಕಾರದ ಯಾವುದೇ ಮಾರ್ಗಸೂಚಿಯನ್ನು ಈ ಪ್ರಕ್ರಿಯೆಯಲ್ಲಿ ಅಳವಡಿಸಿಕೊಂಡಿಲ್ಲ' ಎಂದು ದೂರಿದರು.

`ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಹುದ್ದೆ ಸೇರಿದಂತೆ ನೇಮಕಾತಿಯಲ್ಲಿ ಅಂಗವಿಕಲರಿಗೆ ಮೀಸಲಾತಿ ನೀಡಲಾಗಿದ್ದರೂ ಅಧಿಸೂಚನೆ ಹೊರಡಿಸುವಾಗ ಆ ಸೌಲಭ್ಯ ಒದಗಿಸಿಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇಮಕಾತಿಯಲ್ಲಿ ಅಂಗವಿಕಲರು ಅರ್ಜಿ ಸಲ್ಲಿಸಬಾರದು ಎಂಬ ನಿಯಮವನ್ನು ರೂಪಿಸಿ, ಅನ್ಯಾಯ ಎಸಗಲಾಗಿದೆ' ಎಂದು ಆರೋಪಿಸಿದರು.

`ರಾಜ್ಯದ ವಿವಿಧ ಇಲಾಖೆಗಳಿಂದ ನಡೆದ ಇಂತಹ ತಪ್ಪು ನಡೆಗಳ ವಿರುದ್ಧ ನ್ಯಾಯಾಲಯದಿಂದ ನೋಟಿಸ್ ಜಾರಿಗೊಳಿಸಿದಾಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಸರ್ಕಾರ, ನಮ್ಮ ಆದೇಶ ಅನುಷ್ಠಾನಗೊಳಿಸಲು ಒಪ್ಪಲಿಲ್ಲ' ಎಂದು ಹೇಳಿದರು. `ವಿಶೇಷ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸುವಾಗ ಅವೈಜ್ಞಾನಿಕ ಹಾಗೂ ಕಾನೂನುಬಾಹಿರ ನೀತಿಯನ್ನು ಜಾರಿಗೆ ತರಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ವಿಶೇಷ ಶಿಕ್ಷಣಕ್ಕೆ ನಿಯೋಜನೆಗೊಂಡ ಶಿಕ್ಷಕರಿಗೆ ಯಾವುದೇ ತರಬೇತಿ ನೀಡಿಲ್ಲ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಮಕ್ಕಳ ದಾಖಲಾತಿ ಮತ್ತು ಹಾಜರಾತಿಯಲ್ಲಿ ಸಾಕಷ್ಟು ವ್ಯತ್ಯಾಸವಿದ್ದರೂ ಮುಚ್ಚಿಡಲಾಗಿದೆ. ಆಟಿಸಂ ಮಕ್ಕಳಿಗೆ ಆರೋಗ್ಯ ಮತ್ತು ವೃತ್ತಿ ತರಬೇತಿಗೆ ಆರ್ಥಿಕ ನೆರವು ಒದಗಿಸಿಲ್ಲ. ದೃಷ್ಟಿ ನ್ಯೂನತೆ ಹೊಂದಿದ ಮಕ್ಕಳ ಶಾಲಾ ಪಠ್ಯಕ್ರಮವನ್ನು 30 ವರ್ಷಗಳಿಂದ ಬದಲಾವಣೆ ಮಾಡಿಲ್ಲ' ಎಂದು ಪಟ್ಟಿ ಮಾಡಿದರು.

`ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರದ ಸಮನ್ವಯ ಶಿಕ್ಷಣ (ವಿಶ್ವ ಬ್ಯಾಂಕ್ ಪ್ರಾಯೋಜಿತ) ಯೋಜನೆಯಲ್ಲಿ ರಾಜ್ಯದ ಲಕ್ಷಕ್ಕೂ ಅಧಿಕ ಅಂಗವಿಕಲ ಮಕ್ಕಳು ಶಿಕ್ಷಣ ಪಡೆಯುತ್ತಿದ್ದರೂ ರಾಜ್ಯದ ಯಾವ ಅಧಿಕಾರಿಯೂ ಈ ಕುರಿತು ಕನಿಷ್ಠ ಕಾಳಜಿಯನ್ನೂ ತೋರಿಲ್ಲ. ರಾಜ್ಯ ಸಚಿವ ಸಂಪುಟ ಸಮನ್ವಯ ಶಿಕ್ಷಣ ನೀತಿ ರೂಪಿಸಲು ವಿಫಲವಾಗಿದೆ' ಎಂದು ದೂರಿದರು.

`ಮಕ್ಕಳಿಗೆ ಸೂಕ್ತ ತಪಾಸಣೆ ಮಾಡದೆ, ವೈದ್ಯಕೀಯ ಸಲಕರಣೆ ನೀಡಲು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಎಲ್ಲ ಅಂಗವಿಕಲರಿಗೆ ಗುರುತಿನ ಚೀಟಿ ನೀಡಿಲ್ಲ. ಮಾನಸಿಕ ಅಸ್ವಸ್ಥರನ್ನು ಇದುವರೆಗೆ ಅಂಗವಿಕಲರೆಂದು ಪರಿಗಣನೆ ಮಾಡಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಕೇಂದ್ರದ ಅಧಿಕಾರಿಯಾಗಿ ತಾವು ಕೈಗೊಂಡ ಕ್ರಮಗಳೇನು' ಎಂದು ಪ್ರಶ್ನಿಸಿದಾಗ, `ರಾಜ್ಯ ಸರ್ಕಾರದಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ತೆರೆಯುವಂತೆ ನೋಡಿಕೊಳ್ಳಲಾಗಿದೆ. ಸೇವಾ ಅವಧಿಯಲ್ಲಿ ಅಂಗವೈಕಲ್ಯಕ್ಕೆ ಒಳಗಾದ ವ್ಯಕ್ತಿಗಳಿಗೆ ಬದಲಿ ನೌಕರಿ ಕೊಡಿಸಲಾಗಿದೆ. ಕೆಲವು ಇಲಾಖೆಗಳ ನೇಮಕಾತಿಯಲ್ಲಿ ಅಂಗವಿಕಲರಿಗೆ ಮೀಸಲಾತಿ ದೊರೆಯುವಂತೆ ನೋಡಿಕೊಳ್ಳಲು ಯಶಸ್ವಿಯಾಗಿದ್ದೇವೆ' ಎಂದು ರಾಜಣ್ಣ ತಿಳಿಸಿದರು.

`ಎಲ್ಲ ಹಂತದ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಅಂಗವಿಕಲರ ವಿಷಯವನ್ನೂ ಪರಿಗಣಿಸಬೇಕು. ಶಿಕ್ಷಣ ನೀತಿಯಲ್ಲಿ ಇರುವ ತಾರತಮ್ಯ ಬಗೆಹರಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ನೀಡಬೇಕು' ಎಂದು ಒತ್ತಾಯಿಸಿದರು. ರಾಜಣ್ಣ ಅವರ ಅಧಿಕಾರದ ಅವಧಿ ಇದೇ 16ರಂದು ಕೊನೆಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.