ADVERTISEMENT

ಅಂಬಾರಿಗೆ ಅರ್ಜುನ ಸಮರ್ಥ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಮೈಸೂರು: `ವಿಜಯದಶಮಿಯಂದು ಚಿನ್ನದ ಅಂಬಾರಿ ಹೊರಲು `ಅರ್ಜುನ~ ಸಮರ್ಥ...~
ಚಿನ್ನದ ಅಂಬಾರಿ ಹೊರುವ ಗಂಡು ಆನೆ `ಅರ್ಜುನ~ನ ಮಾವುತ ದೊಡ್ಡ ಮಾಸ್ತಿ ಅವರ ವಿಶ್ವಾಸದ ಮಾತಿದು. `ಅರ್ಜುನ ಸುಮಾರು 16 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾನೆ.

ಒಮ್ಮೆ ಚಿನ್ನದ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದಾನೆ. 12 ವರ್ಷಗಳಿಂದ ಅರ್ಜುನನೊಂದಿಗೆ ಒಡನಾಟ ಹೊಂದಿದ್ದೇನೆ. ಒಮ್ಮೆಯೂ ಆತ ಕಿರಿಕ್ ಮಾಡಿಲ್ಲ. ಜಂಬೂ ಸವಾರಿಯಂದು ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನು ಅರ್ಜುನ ಸಮರ್ಥವಾಗಿ  ನಿಭಾಯಿಸುತ್ತಾನೆ~ ಎನ್ನುತ್ತಾರೆ ಇವರು.

`ನನಗೆ 53 ವರ್ಷ. ಅರಣ್ಯ ಇಲಾಖೆಯಲ್ಲಿ 32 ವರ್ಷ ಸೇವೆ ಸಲ್ಲಿಸಿದ್ದೇನೆ. 1968 ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ `ಖೆಡ್ಡಾ~ ಕಾರ್ಯಾಚರಣೆ ಮೂಲಕ ಅರ್ಜುನನ್ನು ಸೆರೆ ಹಿಡಿಯಲಾಗಿತ್ತು. ಬಳ್ಳೆ ಶಿಬಿರದಲ್ಲಿರುವ ಅರ್ಜುನನಿಗೆ 2 ವರ್ಷ ಕಾವಾಡಿಯಾಗಿ ದುಡಿದ ನಂತರ, ಮಾವುತನಾಗಿ ಅರಣ್ಯ ಇಲಾಖೆ ನನ್ನನ್ನು ನೇಮಿಸಿತು. ನನ್ನ ಮಾತನ್ನು ಅರ್ಜುನ ಎಂದೂ ಮೀರಿಲ್ಲ. ಮಾತಿನಲ್ಲೇ ಅರ್ಜುನನನ್ನು ನಿಯಂತ್ರಿಸುತ್ತೇನೆ. ಒಮ್ಮೆಯೂ ಅಂಕುಶ ಬಳಸಿಲ್ಲ~ ಎಂದು ಹೇಳಿದರು.

ಮಾವುತನನ್ನು ಕೊಂದಿತ್ತಾ?

ಅರಮನೆ ಆವರಣದಲ್ಲಿ ಕಾರಂಜಿ ಕೊಳ ಇಲ್ಲದ ಕಾರಣ ಹೊರಗೆ ಸ್ನಾನಕ್ಕೆ ಕರೆದೊಯ್ಯುವಾಗ 1992 ರಲ್ಲಿ ಮಾವುತನನ್ನು ಅರ್ಜುನ ಆನೆ ಕೊಂದಿತ್ತು. ತುಂಟ ಆನೆಯಾದ್ದರಿಂದ ಅಂಬಾರಿ ಹೊರುವ ಜವಾಬ್ದಾರಿಯನ್ನು ಅರ್ಜುನನಿಗೆ ನೀಡುತ್ತಿರಲಿಲ್ಲ. ಈ ಬಾರಿ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

`ಅರ್ಜುನನೇ ಮಾವುತನನ್ನು ಕೊಂದಿತ್ತು ಎಂಬುದಕ್ಕೆ ಪ್ರತ್ಯಕ್ಷದರ್ಶಿಗಳು ಇಲ್ಲ. 20 ವರ್ಷಗಳ ಹಿಂದಿನ ಘಟನೆಯ ಬಗ್ಗೆ ನಮಗೆ ಗೊತ್ತಿಲ್ಲ~ ಎನ್ನುತ್ತಾರೆ ಆನೆ ವೈದ್ಯ ಡಾ.ನಾಗರಾಜ್ ಮತ್ತು ಮಾವುತ ದೊಡ್ಡ ಮಾಸ್ತಿ.
`ಮನುಷ್ಯರ ಸ್ವಭಾವದಲ್ಲಿ ಭಿನ್ನತೆ ಇರುವಂತೆ ಪ್ರಾಣಿಗಳಲ್ಲೂ ಇದೆ. ಬಲರಾಮ ಸ್ವಾಮ್ಯ ಸ್ವಭಾವದವನು.

`ಅರ್ಜುನ~ ಹಾಗಲ್ಲ. ತನಗೆ ಒಗ್ಗಿಕೊಂಡವರನ್ನು ಮಾತ್ರ ಅರ್ಜುನ ಹತ್ತಿರ ಸೇರಿಸುತ್ತಾನೆ. ಆದರೆ ಮಾವುತನ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತಾನೆ. `ಬಲರಾಮ~ ಅಂಬಾರಿ ಹೊರಲು ಸಮರ್ಥನಾಗಿದ್ದ ಕಾರಣ ಅರ್ಜುನನಿಗೆ ಅಂಬಾರಿ ಹೊರುವ ಅವಕಾಶ ನೀಡಿರಲಿಲ್ಲ. ಈ ಬಾರಿ ಬಲರಾಮ ದೈಹಿಕವಾಗಿ ಕುಗ್ಗಿರುವುದರಿಂದ ಅರ್ಜುನನಿಗೆ ಜವಾಬ್ದಾರಿ ನೀಡಲಾಗಿದೆ~ ಎಂದು ಆನೆ ವೈದ್ಯ ಡಾ.ನಾಗರಾಜ್ ತಿಳಿಸಿದರು.

`ಲೇ ಮತ್ (ಬಾ) ಎಂದಾಗ ಎಲ್ಲೇ ಇದ್ದರೂ ಅರ್ಜುನ ಬರುತ್ತಾನೆ. ಬಳ್ಳೆ ಶಿಬಿರದಲ್ಲಿ ಆತನನ್ನು ನೋಡಿಕೊಳ್ಳುವುದನ್ನು ಬಿಟ್ಟರೆ ನನಗೆ ಬೇರೇನೂ ಕೆಲಸ ಇಲ್ಲ. ನನಗೆ ಮೂರು ಜನ ಗಂಡು ಮಕ್ಕಳು. ಸಣ್ಣಪ್ಪ ಎಂಬ ಮಗನನ್ನು `ಅರ್ಜುನ~ನ ಕಾವಾಡಿಯಾಗಿ ಸರ್ಕಾರ ಎಂಟು ತಿಂಗಳ ಹಿಂದೆ ನೇಮಿಸಿದೆ.

ಕೊನೆ ಮಗ ಗಣೇಶ ಗುತ್ತಿಗೆ ಆಧಾರದ ಮೇಲೆ ದಸರಾ ಆನೆಗಳಿಗೆ ವಿಶೇಷ ಆಹಾರ ತಯಾರಿಸುತ್ತಾನೆ. ನನ್ನ ಪೂರ್ವಜರೆಲ್ಲರೂ ಆನೆಗಳೊಂದಿಗೆ ಒಡನಾಟ ಹೊಂದಿದ್ದವರು. ನನ್ನ ಕುಟುಂಬ ಆನೆಗಳೊಂದಿಗೆ ಬೆರೆತು ಹೋಗಿದೆ~ ಎಂದು ದೊಡ್ಡ ಮಾಸ್ತಿ ಹೇಳಿದರು.

`ಅರ್ಜುನ ಅಂಬಾರಿ ಹೊರುತ್ತಿರುವುದು ಎರಡನೇ ಬಾರಿಯಾದರೆ, ಅಂಬಾರಿ ಆನೆಯ ಮಾವುತನಾಗಿ ಈ ದಸರಾ ನನಗೆ ಮೊದಲನೆಯದು. ಇದು ನನಗೆ ಖುಷಿ ತಂದಿದೆ. ಅರ್ಜುನ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾನೆ. ಯಾವುದೇ ಅನುಮಾನ ಬೇಡ~ 
      ಮಾವುತ ದೊಡ್ಡ ಮಾಸ್ತಿ


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.