ADVERTISEMENT

ಅಕ್ರಮ ಕಟ್ಟಡ ತೆರವು ವಿವರಕ್ಕೆ ತಾಕೀತು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ಬೆಂಗಳೂರು: ಪಾರಂಪರಿಕ ತಾಣ ಹಂಪಿಯಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರವು ಮಾಡುವ ಕುರಿತು ಇದೇ 15ರಂದು ಸ್ಪಷ್ಟ ವಿವರ ನೀಡುವಂತೆ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ. ಹಂಪಿಯ ಕೊಟ್ಟೂರು ಸ್ವಾಮಿ ಕಲ್ಯಾಣ ಖೇಡ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಮತ್ತು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ವಿಭಾಗೀಯ ಪೀಠ, ‘ಹಂಪಿ ವಿಧಾನಸೌಧ ಇದ್ದಂತೆ.

ವಿಧಾನಸೌಧವನ್ನು ಯಾರಾದರೂ ಆಕ್ರಮಿಸಿಕೊಂಡರೆ ಕೈಕಟ್ಟಿ ಕುಳಿತಿರುತ್ತೀರಾ?’ ಎಂದು ತರಾಟೆಗೆ ತೆಗೆದುಕೊಂಡಿದೆ.ಗುರುವಾರ ವಿಚಾರಣೆ ಆರಂಭಿಸಿದ ನ್ಯಾಯಾಲಯ, ಪಾರಂಪರಿಕ ತಾಣವಾಗಿರುವ ಹಂಪಿಯಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರವು ಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು.ಆದರೆ ಅಕ್ರಮ ಕಟ್ಟಡಗಳ ತೆರವು ವಿಷಯದಲ್ಲಿ ಯಾವುದೇ ಪ್ರಗತಿ ಆಗದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಉತ್ತರ ನೀಡಲು ರಾಜ್ಯ ಸರ್ಕಾರದ ವಕೀಲರು ಹಿಂದೇಟು ಹಾಕುವಂತಾಯಿತು.

ಇದರಿಂದ ಅಸಮಾಧಾನಗೊಂಡ ನ್ಯಾ.ಕೇಹರ್, ‘ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗಾಗಿ 2009ರಲ್ಲೇ ಒಂದು ಉನ್ನತಮಟ್ಟದ ಸಮಿತಿ ರಚಿಸಲಾಗಿದೆ. ಇಬ್ಬರು ಜಿಲ್ಲಾಧಿಕಾರಿಗಳು, ಇಬ್ಬರು ಎಸ್‌ಪಿಗಳು ಸಮಿತಿಯಲ್ಲಿದ್ದಾರೆ.ಆ ಸಮಿತಿ ಏನನ್ನೂ ಮಾಡಿಲ್ಲ. ಸುಮ್ಮನೆ ಇರುವುದಾದರೆ ಸಮಿತಿ ಏಕೆ ಬೇಕು’ ಎಂದರು. ‘ಹಂಪಿಯ ವಿಷಯದಲ್ಲಿ ಸರ್ಕಾರ ಆಸಕ್ತಿ ವಹಿಸಿದಂತೆ ಕಾಣುತ್ತಿಲ್ಲ. ನಿಮ್ಮಿಂದ ತೆರವು ಕಾರ್ಯಾಚರಣೆ ನಡೆಸಲು ಆಗದಿದ್ದರೆ ಹೇಳಿ. ಅದಕ್ಕೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸಲಿ, ನಾವು ಕೆಲಸ ಮಾಡಿಸುತ್ತೇವೆ.

ನಿರ್ಲಕ್ಷ್ಯ ವಹಿಸಿದರೆ ಹಂಪಿಯ ಆಡಳಿತಾಧಿಕಾರಿಗಳೇ ನ್ಯಾಯಾಲಯಕ್ಕೆ ಬರಬೇಕಾಗುತ್ತದೆ’ ಎಂದು ಎಚ್ಚರಿಸಿದರು.‘ಹಂಪಿಯಲ್ಲಿ ಒತ್ತುವರಿ ತೆರವಾಗಬೇಕು ಎಂಬುದು ನಮ್ಮ ಉದ್ದೇಶ. ಅದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇರುವುದು ನೋವಿನ ಸಂಗತಿ. ಈ ಪ್ರಕರಣದ ಮೂಲಕ ಅಲ್ಲಿ ಉತ್ತಮ ಆಡಳಿತ ಜಾರಿಗೆ ದಾರಿ ತೋರುವ ಇರಾದೆಯೂ ನ್ಯಾಯಾಲಯಕ್ಕೆ ಇದೆ. ಅದಕ್ಕೆ ಪೂರಕವಾಗಿ ಆದೇಶ ಬಯಸಿದರೆ ನ್ಯಾಯಾಲಯ ನೀಡಲು ಸಿದ್ಧವಿದೆ’ ಎಂದ ಮುಖ್ಯ ನ್ಯಾಯಮೂರ್ತಿಗಳು, ಒಂದು ಬೀದಿಯನ್ನಾದರೂ ಒತ್ತುವರಿ ಮುಕ್ತಗೊಳಿಸಲು ಎಷ್ಟು ಸಮಯಬೇಕು? ಎಂದು ಪ್ರಶ್ನಿಸಿದರು.

ಎಂಟು ವಾರ ಕಾಲವಕಾಶ ನೀಡುವಂತೆ ಸರ್ಕಾರದ ಪರ ವಕೀಲರು ಕೋರಿದರು.ಅದನ್ನು ಮಾನ್ಯ ಮಾಡದ ನ್ಯಾ.ಕೇಹರ್, ‘ಒತ್ತುವರಿದಾರರ ಪುನರ್ವಸತಿಗಾಗಿ ಈಗಾಗಲೇ 15 ಎಕರೆ ಭೂಮಿ ಖರೀದಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮತ್ತೆ ಅಷ್ಟೊಂದು ಸಮಯ ಏಕೆ?’ ಎಂದು ಪ್ರಶ್ನಿಸಿದರು. ಆಗ, ‘ಅಲ್ಲಿ ಅನಕ್ಷರಸ್ಥರೇ ಹೆಚ್ಚಿದ್ದಾರೆ. ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಿದರೆ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆ ಆಗಬಹುದು ಎಂಬ ಆತಂಕವಿದೆ.

ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಸಮತೋಲನ ಕಾಯ್ದುಕೊಂಡು ಕಾರ್ಯಾಚರಣೆ ನಡೆಸಬೇಕಿದೆ’ ಎಂದು ವಕೀಲರು ಉತ್ತರಿಸಿದರು. ‘ಹಂಪಿ ಅಪರಾಧಗಳ ತಾಣ (ಅಡ್ಡೆ) ಆಗಿದೆ. ಅದನ್ನು ರಕ್ಷಿಸಬೇಕಿದೆ. ಈ ದಿಸೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಇದೆ ಎಂದು ಹೇಳಲಾಗದು. ಪರಂಪರೆ ಎಂದೂ ಪರಂಪರೆಯೇ. ಅದನ್ನು ರಕ್ಷಿಸಲು ಸರ್ಕಾರ ಕಾನೂನು ಪ್ರಕಾರ ಕ್ರಮ ಜರುಗಿಸಲೇಬೇಕು’ ಎಂದು ನ್ಯಾಯಮೂರ್ತಿಗಳು ಚಾಟಿ ಬೀಸಿದರು.

ವಿವರ ಸಲ್ಲಿಸಲು ಸೂಚನೆ: ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯ ಕಾರ್ಯಸೂಚಿ ಕುರಿತು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ವಿವರ ನೀಡಬೇಕು. ಈ ಕೆಲಸಕ್ಕಾಗಿ ನಿಯೋಜಿಸಿರುವ ಅಧಿಕಾರಿಗಳು ಮಾಹಿತಿ ಪಡೆದು ನ್ಯಾಯಾಲಯದ ಮುಂದಿಡಬೇಕು ಎಂದು ಸೂಚಿಸಿದ ನ್ಯಾ.ಕೇಹರ್, ವಿಚಾರಣೆಯನ್ನು ಫೆ 15ಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.