ADVERTISEMENT

ಅಕ್ರಮ ಗಣಿ: ಎಸ್‌ಐಟಿ ರಚನೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2011, 19:30 IST
Last Updated 1 ನವೆಂಬರ್ 2011, 19:30 IST
ಅಕ್ರಮ ಗಣಿ: ಎಸ್‌ಐಟಿ ರಚನೆ ಪ್ರಸ್ತಾವ
ಅಕ್ರಮ ಗಣಿ: ಎಸ್‌ಐಟಿ ರಚನೆ ಪ್ರಸ್ತಾವ   

ಬೆಂಗಳೂರು: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರ ವರದಿ ಆಧಾರದಲ್ಲಿ ಕೆಲ ವಿಷಯಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಲು `ವಿಶೇಷ ತನಿಖಾ ದಳ~ (ಎಸ್‌ಐಟಿ) ರಚಿಸುವ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ.

ಗಂಭೀರ ಸ್ವರೂಪದ ಅಕ್ರಮಗಳ ಬಗ್ಗೆ ಹೆಚ್ಚಿನ ತನಿಖೆ ಅಗತ್ಯವಿದ್ದು, ಅದಕ್ಕಾಗಿ ಎಸ್‌ಐಟಿ ರಚಿಸುವಂತೆ ಜುಲೈ 31ರಂದು ಸಲ್ಲಿಸಿದ್ದ ವರದಿಯಲ್ಲಿ ಲೋಕಾ ಯುಕ್ತರು ಶಿಫಾರಸು ಮಾಡಿದ್ದರು. ತನಿಖಾ ದಳ ರಚಿಸುವ ಅಗತ್ಯವಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಸಮಿತಿಯೂ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಶಿಫಾರಸಿಗೆ ಸಚಿವ ಸಂಪುಟ ಸಭೆಯೂ ಒಪ್ಪಿಗೆ ಸೂಚಿಸಿದೆ.

ಅಕ್ರಮ ಗಣಿಗಾರಿಕೆ, ಅರಣ್ಯ ಪ್ರದೇಶದಿಂದ ಅದಿರು ಕಳ್ಳ ಸಾಗಣೆ, ನಕಲಿ ಪರವಾನಗಿಗಳನ್ನು ಬಳಸಿ ಅಕ್ರಮವಾಗಿ ಅದಿರು ಸಾಗಿಸಿರುವುದು, ಅದಿರಿನ ಅಕ್ರಮ ರಫ್ತು ಮತ್ತಿತರ ಗಂಭೀರ ಸ್ವರೂಪದ ಪ್ರಕರಣಗಳ ಬಗ್ಗೆ ತನಿಖೆ ಮುಂದುವರೆಸಲು ಸರ್ಕಾರ ನಿರ್ಧರಿಸಿದೆ.

ಈ ಕಾರಣಕ್ಕಾಗಿಯೇ ಹಲವು ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ದಳ ರಚಿಸಲು ಮುಂದಾಗಿದೆ. ಮುಖ್ಯಮಂತ್ರಿಯವರು ಪ್ರಸ್ತಾವಕ್ಕೆ ಅನುಮೋದನೆ ನೀಡಿದ ತಕ್ಷಣವೇ ತನಿಖಾ ದಳ ರಚನೆಗೆ ಸಂಬಂಧಿಸಿದ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಬೇನಾಮಿ ಕಂಪೆನಿಗಳ ಹೆಸರಿನಲ್ಲಿ ಗಣಿಗಾರಿಕೆ ಮತ್ತು ಅದಿರು ಮಾರಾಟ, ನೋಂದಣಿ ಆಗದ ಕಂಪೆನಿಗಳ ಹೆಸರಿನಲ್ಲಿ ಅಕ್ರಮವಾಗಿ ಅದಿರು ರಫ್ತು ಮಾಡಿರುವುದು, ಬೇನಾಮಿ ಬ್ಯಾಂಕ್ ಖಾತೆಗಳ ಮೂಲಕ ವಹಿವಾಟು ನಡೆಸಿರುವುದು ಮತ್ತಿತರ ಆರೋಪಗಳ ಬಗ್ಗೆಯೂ ಎಸ್‌ಐಟಿ ತನಿಖೆ ನಡೆಸಲಿದೆ.
 
ಅಕ್ರಮ ಗಣಿಗಾರಿಕೆಯಲ್ಲಿ ನೇರವಾಗಿ ಭಾಗಿಯಾಗಿರುವವರು ಮತ್ತು ಅವರ ಜೊತೆ ಷಾಮೀಲಾಗಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ತನಿಖೆ ನಡೆಸುವ ಕೆಲಸವನ್ನು ವಿಶೇಷ ತನಿಖಾ ದಳ ನಿರ್ವಹಿಸಲಿದೆ.

ಉಳಿದಂತೆ ಪೊಲೀಸ್ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ವಾಣಿಜ್ಯ ತೆರಿಗೆ, ಅರಣ್ಯ, ಕಂದಾಯ, ಸಾರಿಗೆ ಮತ್ತಿತರ ಇಲಾಖೆಗಳ ಅಧಿಕಾರಿಗಳು ವಿಶೇಷ ತನಿಖಾ ದಳದಲ್ಲಿ ಇರುತ್ತಾರೆ. ಕೆಲವು ಪ್ರಮುಖ ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತರು ತಮ್ಮ ವರದಿಯಲ್ಲಿ ನೀಡಿರುವ ಶಿಫಾರಸುಗಳ ಆಧಾರದಲ್ಲಿ ಎಸ್‌ಐಟಿ ತನಿಖೆಯ ವ್ಯಾಪ್ತಿ ಮತ್ತು ಅವಧಿಯನ್ನು ಸರ್ಕಾರ ನಿರ್ಧರಿಸಲಿದೆ.

ಕೇಂದ್ರಕ್ಕೂ ಮನವಿ: ಕೇಂದ್ರ ಸರ್ಕಾರದ ಹಣಕಾಸು, ಅರಣ್ಯ ಮತ್ತು ಪರಿಸರ, ರೈಲ್ವೆ ಮತ್ತಿತರ ಇಲಾಖೆಗಳ ವ್ಯಾಪ್ತಿಗೊಳಪಡುವ ಕೆಲವು ವಿಷಯಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸುವ ಹಾಗೂ ಕ್ರಮ ಜರುಗಿಸುವ ಸಂಬಂಧ ಕೇಂದ್ರಕ್ಕೆ ಮನವಿ ಸಲ್ಲಿಸುವಂತೆ ಲೋಕಾಯುಕ್ತ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಒಟ್ಟು 33 ವಿಷಯಗಳಿಗೆ ಸಂಬಂಧಿಸಿದಂತೆ ಮುಂದಿನ ಕ್ರಮ ಜರುಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪೆನಿ, ಅನಂತಪುರ ಮೈನಿಂಗ್ ಕಂಪೆನಿ ಮತ್ತು ಅಸೋಸಿಯೇಟೆಡ್ ಮೈನಿಂಗ್ ಕಂಪೆನಿಗಳು ಅದಿರು ರಫ್ತಿನಲ್ಲಿ ನಡೆಸಿರುವ ಅಕ್ರಮ ವ್ಯವಹಾರಗಳು, ತೆರಿಗೆ ವಂಚನೆ, ಜನಾರ್ದನ ರೆಡ್ಡಿ ಮತ್ತು ಅವರ ಸಹಚರರು ನಡೆಸಿರುವ ಬೇನಾಮಿ ವ್ಯವಹಾರ, ಕಪ್ಪುಹಣದ ವರ್ಗಾವಣೆಯಂತಹ ವಿಷಯಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಲಿದೆ. ಗಣಿ ಗುತ್ತಿಗೆಗಳ ಮಂಜೂರಾತಿ ಮತ್ತು ನವೀಕರಣದಲ್ಲಿ ಕೇಂದ್ರ ಸರ್ಕಾರದ ಹಂತದಲ್ಲಿ ನಡೆದ ಲೋಪಗಳ ವಿಷಯವೂ ಈ ಪಟ್ಟಿಯಲ್ಲಿ ಸೇರಿದೆ.

ಜಾರಿ ನಿರ್ದೇಶನಾಲಯ, ಕಂದಾಯ ಗುಪ್ತಚರ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಸುಂಕ ಇಲಾಖೆ, ಭಾರತೀಯ ರಿಸರ್ವ್ ಬ್ಯಾಂಕ್, ಭಾರತೀಯ ಗಣಿ ನಿರ್ದೇಶನಾಲಯ ಮತ್ತಿತರ ಪ್ರಮುಖ ತನಿಖಾ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುತ್ತದೆ.

ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಯ ಭಾಗವಾಗಿ ನಡೆದಿರುವ ಕೆಲ ಗಂಭೀರ ಸ್ವರೂಪದ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಈ ಎಲ್ಲ ಸಂಸ್ಥೆಗಳನ್ನೂ ಕೋರಲು ಸರ್ಕಾರ ತೀರ್ಮಾನಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮೊಹಾಂತಿ ನೇತೃತ್ವ?
ಐಪಿಎಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲೇ ಎಸ್‌ಐಟಿ ರಚಿಸುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಉನ್ನತಮಟ್ಟದ ಸಮಿತಿ ಮಾಡಿರುವ ಶಿಫಾರಸಿಗೆ ಸಚಿವ ಸಂಪುಟದ ಒಪ್ಪಿಗೆ ದೊರೆತಿದೆ. ಅಕ್ರಮ ಗಣಿಗಾರಿಕೆಯಂತಹ ವಿಷಯಗಳ ಬಗ್ಗೆ ತನಿಖೆ ನಡೆಸಿ, ಅನುಭವವಿರುವ ಐಜಿಪಿ ದರ್ಜೆಯ ಅಧಿಕಾರಿಯನ್ನೇ ಈ ಹುದ್ದೆಗೆ ನೇಮಿಸುವಂತೆಯೂ ಸಮಿತಿ ಶಿಫಾರಸು ಮಾಡಿತ್ತು.

ಪ್ರಸ್ತುತ ಬೆಂಗಳೂರು ನಗರದ ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಹುದ್ದೆಯಲ್ಲಿರುವ ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ಅವರನ್ನು ಎಸ್‌ಐಟಿ ಮುಖ್ಯಸ್ಥರ ನ್ನಾಗಿ ನೇಮಕ ಮಾಡಲು ಸರ್ಕಾರ ಒಲವು ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಡಿಐಜಿ ದರ್ಜೆಯಲ್ಲಿರುವ ಅವರು ಕೆಲವೇ ದಿನಗಳಲ್ಲಿ ಐಜಿಪಿ ದರ್ಜೆಗೆ ಬಡ್ತಿ ಹೊಂದಲಿದ್ದಾರೆ. ಸಿಬಿಐ ಮತ್ತು ಲೋಕಾಯುಕ್ತದಲ್ಲಿದ್ದ ಅವಧಿಯಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸಿರುವುದ ರಿಂದ ಸರ್ಕಾರ, ಮೊಹಾಂತಿ ಅವರ ಹೆಸರನ್ನು ಈ ಹುದ್ದೆಗೆ ಪರಿಗಣಿಸಲು ಪ್ರಮುಖ ಕಾರಣ ಎನ್ನಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.