ADVERTISEMENT

ಅಕ್ರಮ ಜಾನುವಾರು ಸಾಗಣೆ: 27 ದನ ವಶ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 20:00 IST
Last Updated 23 ಸೆಪ್ಟೆಂಬರ್ 2013, 20:00 IST

ಗುಂಡ್ಲುಪೇಟೆ: ತಾಲ್ಲೂಕಿನ ಅರಣ್ಯ ಭಾಗಗಳ ಮೂಲಕ ಅಕ್ರಮವಾಗಿ ಜಾನುವಾರುಗಳನ್ನು ಕೇರಳಕ್ಕೆ ಸಾಗಿಸುತ್ತಿದ್ದ ಕಂಟೈನರ್‌ ವಾಹನವನ್ನು ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಸೋಮವಾರ ವಶಪಡಿಸಿಕೊಂಡು ಗುಂಡ್ಲುಪೇಟೆ ಪೋಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಬೆಂಗಳೂರಿನ ಪ್ರಾಣಿ ದಯಾ ಸಂಸ್ಥೆ ‘ಗೌ ಗ್ಯಾನ್‌ ಫೌಂಡೇಷನ್‌’ನ ನಾಲ್ವರು ಕಾರ್ಯಕರ್ತರಾದ ಪ್ರಸಾದ್‌, ಸೋನು, ಸಿಂಗ್‌ ಹಾಗೂ ಜೋಷನ್‌ ಆ್ಯಂಟನಿ ಅವರು ಮೂಲೆ ಹೊಳೆ ಗಡಿ ಭಾಗದಲ್ಲಿ ವಾಹನದಲ್ಲಿ ಕಾದು ಕುಳಿತು ಜಾನುವಾರುಗಳ ಅಕ್ರಮ ಸಾಗಾಣಿಕೆಯನ್ನು ಕ್ಯಾಮೆರಾ ದಲ್ಲಿ ಚಿತ್ರೀಕರಿಸಿಕೊಂಡರು.

ಅದೇ ದಾರಿಯಲ್ಲಿ ಬಂದ ಕಂಟೈನರ್‌ ವಾಹನವನ್ನು ತಡೆದು, ಪರಿಶೀಲಿಸಿದಾಗ ಅದರಲ್ಲಿ 27 ಜಾನುವಾರುಗಳನ್ನು ತುಂಬಿಸಲಾಗಿತ್ತು. ಅದನ್ನು ಗುಂಡ್ಲುಪೇಟೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ಅವರ ವಶಕ್ಕೆ ಒಪ್ಪಿಸಿದ್ದಾರೆ.

ಅಕ್ರಮವಾಗಿ ಜಾನುವಾರುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಪಿರಿಯಾಪಟ್ಟಣ ಮೂಲದ ಚಾಲಕ ತನ್ವೀರ್‌, ಅವನ ಸಹಚರ ನಾಸೀರ್‌ ಅವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಇದೇ ವಿಚಾರವಾಗಿ ಪೊಲೀಸ್‌ ಅಧಿಕಾರಿಗಳು ಕಂಟೈನರ್‌ ವಾಹನದ ಬಳಿ ದೂರು ನೀಡಿದ ಕಾರ್ಯಕರ್ತ ರಿಂದ ಮಾಹಿತಿ ಪಡೆಯುತ್ತಿದ್ದಾಗ ವಾಹನಗಳನ್ನು ಚೆಕ್‌ಪೋಸ್ಟ್‌ನಿಂದ ದಾಟಲು ಸಹಾಯ ಮಾಡುವ ಮಧ್ಯವರ್ತಿಯ ಕಡೆಯ ಯುವಕರ ಗುಂಪು ಕಾರ್ಯಕರ್ತರಾದ ಪ್ರಸಾದ್‌ ಮತ್ತು ಜೋಷನ್‌, ಆ್ಯಂಟನಿಯವರ ಮೇಲೆ ಹಲ್ಲೆ ನಡೆಸಲು ಮುಂದಾದರು. ಅವರ ಬಳಿಯಲ್ಲಿದ್ದ ಕ್ಯಾಮೆರಾವನ್ನು ಕಿತ್ತುಕೊಂಡು ನಾಶಪಡಿಸಿದರು.

ಅದಲ್ಲದೇ ಕ್ಯಾಮೆರಾದಲ್ಲಿ ಚಿತ್ರೀಕರಣಗೊಂಡಿದ್ದ ದೃಶ್ಯಗಳನ್ನು ನಾಶಪಡಿಸಿದರು.

ಈ ಸಂದರ್ಭ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಎಂದು ಕಾರ್ಯಕರ್ತ ಪ್ರಸಾದ್‌ ವಿಷಾದ ವ್ಯಕ್ತಪಡಿಸಿದರು.

ಹಲ್ಲೆ ನಡೆಸಲು ಮುಂದಾದ ಮಧ್ಯವರ್ತಿ ಮತ್ತು ಅವರ ಕಡೆಯವರ  ಮೇಲೆ ದೂರು ದಾಖಲಿಸಲು ಮುಂದಾದಾಗ ಒಂದು ದೂರು ದಾಖಲಾದ ನಂತರ ಮತ್ತೊಂದು ದೂರು ದಾಖಲಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು
ಗೋ ಗ್ಯಾನ್‌ ಫೌಂಡೇಷನ್‌ನ ಕಾರ್ಯಕರ್ತ ಪ್ರಸಾದ್‌ ಅವರು ವರದಿಗಾರರಿಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.