ADVERTISEMENT

ಅಕ್ರಮ ಹೋಮ್‌ ಸ್ಟೇಗಳಿಗೆ ಕಡಿವಾಣಕ್ಕೆ ಮೊರೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 19:51 IST
Last Updated 12 ಅಕ್ಟೋಬರ್ 2017, 19:51 IST

ಚಿಕ್ಕಮಗಳೂರು: ‘ಜಿಲ್ಲೆಯಲ್ಲಿ 450 ಹೋಮ್‌ ಸ್ಟೇಗಳಿದ್ದು, ಈ ಪೈಕಿ 281 ಹೋಮ್‌ ಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿವೆ. 169 ಹೋಮ್‌ ಸ್ಟೇಗಳು ಈವರೆಗೂ ಅರ್ಜಿ ಸಲ್ಲಿಸದಿರುವುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ’ ಎಂದು ಭದ್ರಾ ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಡಿ.ವಿ.ಗಿರೀಶ್, ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ.ವೀರೇಶ್ ತಿಳಿಸಿದ್ದಾರೆ.

‘ಜಿಲ್ಲೆಯ ವನ್ಯಜೀವಿ ಕಾರ್ಯಕರ್ತರ ತಂಡವು ಎರಡು ತಿಂಗಳಿನಿಂದ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಗೊತ್ತಾಗಿದೆ. ಅರ್ಜಿ ಸಲ್ಲಿಸಿರುವ 281 ಹೋಮ್‌ ಸ್ಟೇಗಳಲ್ಲಿ 37 ಪುನರಾವರ್ತನೆಯಾಗಿವೆ. ಅರ್ಜಿ ಸಲ್ಲಿಸದಿರುವ 169 ಹೋಮ್‌ ಸ್ಟೇಗಳು ಈಗಲೂ ಕಾರ್ಯಚಟುವಟಿಕೆ ನಡೆಸುತ್ತಿವೆ. ಒಟ್ಟು 450 ಹೋಮ್‌ ಸ್ಟೇಗಳಲ್ಲಿ ಸರ್ಕಾರದ ನಿಯಮಾನುಸಾರ ಕಾರ್ಯ ನಿರ್ವಹಿಸುತ್ತಿರುವುದು 12 ಮಾತ್ರ. ತೊಗರಿಹಂಕಲ್ ಬಳಿ 44 ಕೊಠಡಿಗಳಿರುವ ವಸತಿ ಗೃಹ
ವೊಂದು ಹೋಮ್‌ ಸ್ಟೇ ಎಂದು ಘೋಷಿಸಿಕೊಂಡಿದೆ’ ಎಂದು ದೂರಿದ್ದಾರೆ.

‘ಹೋಮ್‌ ಸ್ಟೇಗಳ ಮೂಲ ಉದ್ದೇಶ ಮರೆಯಾಗಿ, ಅವು ಬೇರೆ ಹಾದಿ ತುಳಿದಿವೆ. ತಡರಾತ್ರಿವರೆಗೂ ಮೋಜುಮಸ್ತಿ, ಡಿಜೆ, ಮದ್ಯಪಾನ ನಡೆಯುತ್ತಿವೆ. ಅನೇಕ ಕಡೆ ನಿವಾಸಿಗಳಿಗೆ ಕಿರಿಕಿರಿ ಆರಂಭವಾಗಿದೆ. ಪರಿಸರ ಹಾಳಾಗುತ್ತಿದೆ’ ಎಂದು ಅವರು ದೂರಿದ್ದಾರೆ.

ADVERTISEMENT

‘ಜಿಲ್ಲೆಗೆ ವಾರಾಂತ್ಯದಲ್ಲಿ ಸುಮಾರು 12 ಸಾವಿರ ಮಂದಿ ಭೇಟಿ ನೀಡುತ್ತಾರೆ. ಆದಾಯ ₹ 68 ಲಕ್ಷದಿಂದ ₹ 2.5 ಕೋಟಿವರೆಗೂ ಬರುತ್ತಿದೆ. ಜಿಲ್ಲಾಡಳಿತ ಪರಿಶೀಲಿಸಿ ಕಾನೂನು ಉಲ್ಲಂಘಿಸಿರುವ ಹೋಮ್‌ ಸ್ಟೇಗಳ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.