ADVERTISEMENT

ಅಡಿಕೆ ಪರಿಹಾರಕ್ಕೆ ಹಣ ಬಿಡುಗಡೆ

ಆರ್ಥಿಕ ಇಲಾಖೆಗೆ ಸಿ.ಎಂ ಆದೇಶ: ಹೆಕ್ಟೇರ್‌ಗೆ ರೂ 12 ಸಾವಿರ ನಿಗದಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 19:59 IST
Last Updated 7 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಕೊಳೆ ರೋಗದಿಂದ ಹಾನಿಗೆ ಒಳಗಾಗಿರುವ ಎಲ್ಲಾ ಅಡಿಕೆ ಬೆಳೆಗಾರರಿಗೂ ಪರಿಹಾರ ವಿತರಿಸಲು ಅಗತ್ಯ ಇರುವಷ್ಟು ಅನುದಾನವನ್ನು ತೋಟಗಾರಿಕಾ ಇಲಾಖೆಗೆ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಇಲಾಖೆಯ ಅಧಿಕಾರಿಗಳಿಗೆ ಶನಿವಾರ ಆದೇಶಿಸಿದ್ದಾರೆ.


ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಯವರು ಶನಿವಾರ ವಿಧಾನಸೌಧದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಕೊಳೆ ರೋಗದಿಂದ ಹಾನಿಗೆ ಒಳಗಾಗಿರುವ ಎಲ್ಲಾ ಅಡಿಕೆ ಬೆಳೆಗಾರರಿಗೂ ಪ್ರತಿ ಹೆಕ್ಟೇರ್‌ಗೆ 12 ಸಾವಿರ ರೂಪಾಯಿ ದರದಲ್ಲಿ ಪರಿಹಾರ ನೀಡಬೇಕು. ನಷ್ಟಕ್ಕೀಡಾಗಿರುವ ಎಲ್ಲಾ ರೈತರಿಗೂ ಪರಿಹಾರ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಆದೇಶ ನೀಡಿದರು.

ಅಡಿಕೆ ಬೆಳೆಗಾರರಿಗೆ ಪರಿಹಾರ ವಿತರಿಸಲು ತೋಟಗಾರಿಕಾ ಇಲಾಖೆಗೆ 25 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಆದರೆ, ಎಲ್ಲಾ ರೈತರಿಗೆ ಪರಿಹಾರ ವಿತರಿಸಲು ಇನ್ನೂ 48 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಕೋರಿ ತೋಟಗಾರಿಕಾ ಇಲಾಖೆ ಪ್ರಸ್ತಾವ ಸಲ್ಲಿಸಿತ್ತು. ಹೆಚ್ಚುವರಿಯಾಗಿ ಬಿಡುಗಡೆ ಮಾಡುವ ಮೊತ್ತದ ಕುರಿತು ಮುಖ್ಯಮಂತ್ರಿಯವರು ಸ್ಪಷ್ಟವಾಗಿ ಯಾವುದೇ ಸೂಚನೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ಮನವಿ ಕುರಿತು ಚರ್ಚೆ: ಅತಿವೃಷ್ಟಿಯಿಂದ ಹಾನಿಗೆ ಒಳಗಾಗಿರುವ ಅಡಿಕೆ ಬೆಳೆಗಾರರಿಗೆ ಹೆಚ್ಚಿನ ಪರಿಹಾರ ಒದಗಿಸಲು ಆರ್ಥಿಕ ನೆರವು ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಬಗ್ಗೆಯೂ ಮುಖ್ಯಮಂತ್ರಿಯವರು ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ. ಮನವಿಯಲ್ಲಿ ಉಲ್ಲೇಖಿಸಬೇಕಿರುವ ಅಂಕಿಅಂಶಗಳು, ಅತಿವೃಷ್ಟಿಯಿಂದ ಹಾನಿಗೆ ಒಳಗಾಗಿರುವ ಅಡಿಕೆ ತೋಟಗಳ ವಿಸ್ತೀರ್ಣ, ಸಂಭವಿಸಿರುವ ಹಾನಿಯ ಅಂದಾಜು ಮೊತ್ತ ಮತ್ತಿತರ ಅಂಶಗಳ ಬಗ್ಗೆ ಅವರು ಮಾಹಿತಿ ಪಡೆದಿದ್ದಾರೆ.

ಕೊಳೆ ರೋಗದ ನಿಯಂತ್ರಣದ ಕುರಿತು ಸಂಶೋಧನೆ ಮತ್ತು ಔಷಧಿಗಳನ್ನು ಅಭಿವೃದ್ಧಿಪಡಿಸುವ ಸಂಬಂಧ ಪ್ರತ್ಯೇಕ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ರಾಜ್ಯದಲ್ಲಿ ಪದೇ ಪದೇ ಅಡಿಕೆ ಬೆಳಗಾರರು ಸಂಕಷ್ಟ ಎದುರಿಸುತ್ತಿರುವುದನ್ನು ತಪ್ಪಿಸಲು ನೆರವು ನೀಡುವಂತೆ ಕೋರಲು ವಿಸ್ತೃತವಾದ ಮನವಿಯನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT