ADVERTISEMENT

ಅತೃಪ್ತಿ ಶಮನಕ್ಕೆ ಪ್ರಧಾನ್ ಕಸರತ್ತು

​ಪ್ರಜಾವಾಣಿ ವಾರ್ತೆ
Published 18 ಮೇ 2012, 19:30 IST
Last Updated 18 ಮೇ 2012, 19:30 IST

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಬಿಕ್ಕಟ್ಟು ಶಮನಕ್ಕೆ ಕಸರತ್ತು ಮುಂದುವರಿದಿದೆ. ಪಕ್ಷದ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಶುಕ್ರವಾರ ಇಡೀ ದಿನ ಹಲವು ಸುತ್ತಿನ ಸಭೆಗಳನ್ನು ನಡೆಸಿದರು. ಮುಖಂಡರಲ್ಲಿನ ಅಸಮಾಧಾನವನ್ನು ತಿಳಿಗೊಳಿಸುವ ಯತ್ನ ಮಾಡಿದರು.

ಶುಕ್ರವಾರ ರಾತ್ರಿ ನಗರಕ್ಕೆ ಬರಬೇಕಿದ್ದ ಪಕ್ಷದ ಮತ್ತೊಬ್ಬ ಉಸ್ತುವಾರಿ ಅರುಣ್ ಜೇಟ್ಲಿ ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ತಮ್ಮ ಪ್ರವಾಸ  ರದ್ದುಪಡಿಸಿದ್ದಾರೆ. ಹೀಗಾಗಿ ಬಿಕ್ಕಟ್ಟು ಪರಿಹರಿಸುವ ಪೂರ್ಣ ಹೊಣೆ ಪ್ರಧಾನ್ ಹೆಗಲೇರಿದೆ.

ಬೆಳಿಗ್ಗೆ ದೆಹಲಿಯಿಂದ ಬಂದ ಪ್ರಧಾನ್ ಅವರು ಪಕ್ಷದ ಪ್ರಮುಖರಾದ ಸಂತೋಷ್ ಮತ್ತು ಸತೀಶ್ ಜತೆ ಸುದೀರ್ಘ ಮಾತುಕತೆ ನಡೆಸಿದರು. ಪಕ್ಷದ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದರು. ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಎರಡು ಬಾರಿ ಅವರ ರೇಸ್‌ಕೋರ್ಸ್ ರಸ್ತೆ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ವಿರುದ್ಧ ದೊಡ್ಡ ಆರೋಪ ಪಟ್ಟಿಯನ್ನೇ ಸಲ್ಲಿಸಿದರು ಎಂದು ಗೊತ್ತಾಗಿದೆ.

ಬಿಎಸ್‌ವೈ ಅಸಮಾಧಾನ: `ಮುಖ್ಯಮಂತ್ರಿಯವರು ಮೊದಲು ಶಾಸಕಾಂಗ ಪಕ್ಷದ ಸಭೆ ಕರೆಯಲಿ. ನಾಯಕತ್ವ ಕುರಿತು ಶಾಸಕರ ಅಭಿಪ್ರಾಯ ಸಂಗ್ರಹಿಸಲಿ. ಶಾಸಕರ ಇಚ್ಛಾನುಸಾರ ನಿರ್ಧಾರ ಆಗಲಿ. ನಂತರ ಸಂಧಾನದ ಮಾತು~ ಎಂದು ಯಡಿಯೂರಪ್ಪ ಖಡಕ್ಕಾಗಿ ಪ್ರಧಾನ್ ಅವರಿಗೆ ಹೇಳಿದರು ಎಂದು  ಮೂಲಗಳು ತಿಳಿಸಿವೆ.

`ಪಕ್ಷ ನನ್ನನ್ನು ಕಡೆಗಣಿಸಿದೆ. ಇದನ್ನು ಸಹಿಸಲು ಸಾಧ್ಯ ಇಲ್ಲ. ವಿರೋಧಿಗಳ ಜತೆ ಮುಖ್ಯಮಂತ್ರಿ ಸೇರಿದಂತೆ ಪಕ್ಷದ ಹಲವರು ಸ್ನೇಹ ಬೆಳೆಸಿ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಸುತ್ತಿದ್ದಾರೆ~ ಎಂದು ಯಡಿಯೂರಪ್ಪ ಅಸಮಾಧಾನ ಸೂಚಿಸಿದರು.

`ಸಿಬಿಐ ತನಿಖೆಯನ್ನು ಸಮರ್ಥವಾಗಿ ಎದುರಿಸಲು ಪಕ್ಷ ನಿಮಗೆ ಪೂರ್ಣ ಸಹಕಾರ ನೀಡಲಿದೆ. ಈ ಸಂದರ್ಭದಲ್ಲಿ ಪಕ್ಷ ತ್ಯಜಿಸುವ ಸಾಹಸ ಮಾಡಿದರೆ ನಿಮಗೇ ಅಪಾಯ. ಇದನ್ನು ಅರ್ಥ ಮಾಡಿಕೊಂಡು ಪಕ್ಷದ ಜತೆ ಹೊಂದಿಕೊಂಡು ಹೋಗಿ~ ಎಂದು ಪ್ರಧಾನ್ ಕಿವಿಮಾತು ಹೇಳಿದರು ಎಂದು ಗೊತ್ತಾಗಿದೆ.

ಪಕ್ಷದ ಕಚೇರಿಯಲ್ಲಿ ಸಭೆ: ಮೈಸೂರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮ ಮುಗಿಸಿಕೊಂಡು ಸಂಜೆ ನಗರಕ್ಕೆ ವಾಪಸಾದ ಮುಖ್ಯಮಂತ್ರಿ ಸದಾನಂದ ಗೌಡ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ಜತೆಗೂ ಪ್ರಧಾನ್ ಅವರು ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದರು.

ಸಂಪುಟ ವಿಸ್ತರಣೆಗೆ ಒತ್ತಡ: ಈ ನಡುವೆ ಸಂಪುಟ ವಿಸ್ತರಣೆಗೆ ಒತ್ತಾಯಿಸಲು ಶಾಸಕರಿಂದ ಸಹಿ ಸಂಗ್ರಹಿಸಿರುವ ಸಿ.ಟಿ.ರವಿ ನೇತೃತ್ವದ ನಿಯೋಗ ಪ್ರಧಾನ್ ಅವರನ್ನು ಶನಿವಾರ ಭೇಟಿ ಮಾಡಲಿದೆ. 70ಕ್ಕೂ ಹೆಚ್ಚು ಶಾಸಕರು ಸಹಿ ಹಾಕಿರುವ ಮನವಿ ಪತ್ರವನ್ನು ಪ್ರಧಾನ್ ಅವರಿಗೆ ಸಲ್ಲಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.