ತಾಳಿಕೋಟೆ: ಕೇದಾರ ಮತ್ತು ಬದರಿ ಯಾತ್ರೆಗೆ ಹೋಗಿದ್ದ ಬಾಗಲಕೋಟೆ ಜಲ ನಿರ್ಮಲ ಯೋಜನೆಯ ಎಇಇ ನರಸಯ್ಯ ಶೆಟ್ಟಿ ಮತ್ತು ಅವರ ಕುಟುಂಬದ ಎಂಟು ಸದಸ್ಯರು ಶನಿವಾರ ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದಾರೆ. ಶೆಟ್ಟಿ ಕುಟುಂಬ ಜೂನ್ 14 ರ ಸಂಜೆಯಿಂದ 18 ರ ಮಧ್ಯಾಹ್ನದ ವರೆಗೆ ಸಂಪರ್ಕಕ್ಕೆ ಸಿಗದ ಕಾರಣ ಪಟ್ಟಣದಲ್ಲಿರುವ ಅವರ ಸಂಬಂಧಿಕರು ಆತಂಕಗೊಂಡಿದ್ದರು.
ಬೆಂಗಳೂರಿಗೆ ಬಂದಿಳಿದ ಅವರು `ಪ್ರಜಾವಾಣಿ'ಯೊಂದಿಗೆ ದೂರವಾಣಿ ಮೂಲಕ ಮಾತನಾಡಿ, `ಅದೊಂದು ಭಯಾನಕ ಅನುಭವ, ಕರಾಳ ನೆನಪು. ಧಾರಾಕಾರ ಮಳೆ, ಎಲ್ಲವನ್ನೂ ಸೆಳೆದುಕೊಂಡು ಹೋಗುತ್ತಿರುವ ಪ್ರವಾಹ, ನೀರು, ಆಹಾರ, ಔಷಧಿ ಇಲ್ಲದ ಪರಿಸ್ಥಿತಿ. ಆದರೂ ನಾವು ಬದುಕಿ ಬಂದಿದ್ದೇವೆ ಎಂದರೆ ದೇವರ ದಯೆ ನಮ್ಮನ್ನು ಉಳಿಸಿದೆ' ಎಂದರು.
`ಅಲ್ಲಿನ ಪರಿಸ್ಥಿತಿ ನೋಡಿದರೆ ಯಾವುದೇ ನೆರವು ಸಿಗುವ ನಿರೀಕ್ಷೆ ಇಲ್ಲ. ಖಾಸಗಿಯವರು ಹೆಲಿಕಾಪ್ಟರ್‌ನಲ್ಲಿ ನಮ್ಮ ಕುಟುಂಬದವರನ್ನು ಎರಡು ತಂಡಗಳಲ್ಲಿ ಕರೆತಂದು ಜೀವ ಉಳಿಸಿದರು. ಮರುಜನ್ಮ ನೀಡಿದ ಅವರಿಗೆ ನಾವು ಬದುಕಿರುವವರೆಗೂ ಕೃತಜ್ಞತೆ ಸಲ್ಲಿಸಬೇಕು. ಅಲ್ಲಿ ಇನ್ನೂ 8,000ಕ್ಕೂ ಹೆಚ್ಚು ಜನರು ತೊಂದರೆಯಲ್ಲಿದ್ದು, ಹೇಗಾದರೂ ಮಾಡಿ ರಕ್ಷಿಸಬೇಕು' ಎಂದು ಮನವಿ ಮಾಡಿದರು.
`ಗುರುವಾರ ಜೋಶಿಮಠದಲ್ಲಿ ತಂಗಿದ್ದ ನಾವು ಶುಕ್ರವಾರ ಹೃಷಿಕೇಶದಲ್ಲಿದ್ದೆವು. ಈಗ ಡೆಹ್ರಾಡೂನ್‌ನಿಂದ ದೆಹಲಿಗೆ ಬಂದು ಅಲ್ಲಿಂದ ಸುರಕ್ಷಿತವಾಗಿ ಬೆಂಗಳೂರು ಸೇರಿದೆವು' ಎಂದು ವಿವರಿಸಿದರು.
`ಸಹೋದರ ನರಸಯ್ಯಶೆಟ್ಟಿ, ಅತ್ತಿಗೆ ಪಂಕಜಶೆಟ್ಟಿ, ಮಗಳು ಮೇಘಾ ಶೆಟ್ಟಿ ಸಂಬಂಧಿಕರಾದ ಗುಲ್ಬರ್ಗಾದ ಕೇದಾರನಾಥ ಜಾಜಿ, ಸುಜಾತಾ ಜಾಜಿ, ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ರಾಘವೇಂದ್ರ ಶೆಟ್ಟಿ, ಗೋಪಾಲಶೆಟ್ಟಿ ಹಾಗೂ ಮೇಘಾಳ ಅತ್ತೆ ಸೇರಿ ಎಂಟೂ ಜನ ಕ್ಷೇಮವಾಗಿ ಮರಳಿರುವುದು ದೇವರ ದಯೆ ಹಾಗೂ ಎಲ್ಲರ ಹಾರೈಕೆ' ಎಂದು ನರಸಯ್ಯ ಅವರ ಸಹೋದರ ವಾಸುದೇವ ಹೆಬಸೂರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.