ADVERTISEMENT

ಅಧಿವೇಶನಕ್ಕೆ ವಿಳಂಬ ಕಾರ್ಮೋಡ

ಶ್ರೀಪಾದ ಯರೇಕುಪ್ಪಿ
Published 1 ಜೂನ್ 2012, 19:30 IST
Last Updated 1 ಜೂನ್ 2012, 19:30 IST
ಅಧಿವೇಶನಕ್ಕೆ ವಿಳಂಬ ಕಾರ್ಮೋಡ
ಅಧಿವೇಶನಕ್ಕೆ ವಿಳಂಬ ಕಾರ್ಮೋಡ   

ಬೆಳಗಾವಿ: ಇಲ್ಲಿಯ ಸುವರ್ಣ ವಿಧಾನಸೌಧ ಅಧಿವೇಶನಕ್ಕೆ ಸಜ್ಜಾಗುತ್ತಿದ್ದು, ಅಂತಿಮ ಹಂತದ ಕಾಮಗಾರಿಗಳು ಭರದಿಂದ ಸಾಗಿವೆ. ಇದೇ ತಿಂಗಳು ಎಲ್ಲ ಕೆಲಸಗಳು ಪೂರ್ಣಗೊಳ್ಳಲಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಅಲ್ಲಿನ ಪರಿಸ್ಥಿತಿ ಗಮನಿಸಿದರೆ ಇನ್ನೂ ಕನಿಷ್ಠ ಎರಡು ತಿಂಗಳಾದರೂ ಬೇಕಾಗಬಹುದು. ಹೀಗಾಗಿ ಈ ಬಾರಿ ಮಳೆಗಾಲದ ಅಧಿವೇಶನ ಇಲ್ಲಿ ನಡೆಯುವುದೇ ಎಂಬ ಅನುಮಾನ ಉಂಟಾಗಿದೆ.

ಸುವರ್ಣ ವಿಧಾನಸೌಧ ಕಟ್ಟಡ ಪೂರ್ಣಗೊಳಿಸಿ ಅಧಿವೇಶನ ನಡೆಸುವ ಬಗ್ಗೆ ಹೇಳಿಕೆ ಮಾತ್ರ ನೀಡುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಈ ಬಗ್ಗೆ ಆಸಕ್ತಿ ಇರುವುದು ಕಾಣುತ್ತಿಲ್ಲ. ಕಟ್ಟಡದ ಉಸ್ತುವಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರಿಗೆ ವಹಿಸಲಾಗಿತ್ತು. ಕಳೆದ ಎರಡು ತಿಂಗಳಿಂದ ಸಚಿವರು ಇತ್ತ ಕಡೆಗೆ ಆಗಮಿಸಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ವಿಧಾನಸಭೆ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಏಪ್ರಿಲ್ 3 ರಂದು ಸುವರ್ಣ ವಿಧಾನಸೌಧ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಮುಂಬರುವ ಮಳೆಗಾಲದ ವಿಧಾನಮಂಡಲ ಅಧಿವೇಶನವನ್ನು ಜುಲೈ ತಿಂಗಳಲ್ಲಿ ಇಲ್ಲಿಯೇ ನಡೆಸಲಾಗುವುದು ಎಂದೂ ಸಹ ಹೇಳಿದ್ದರು. ಆದರೆ ಸರ್ಕಾರದ ಉಸ್ತುವಾರಿ ಸರಿಯಿರದ ಕಾರಣ ಕಟ್ಟಡ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ ಇದೆ.

ರಾಜ್ಯ ಬಿಜೆಪಿ ಸರ್ಕಾರದಲ್ಲಿನ ನಿತ್ಯದ ಬೆಳವಣಿಗೆಗಳು ಅಧಿವೇಶನ ನಡೆಸುವ ಬಗ್ಗೆ ಪೂರಕವಾಗಿಲ್ಲ. ಆಂತರಿಕ ಕಚ್ಚಾಟದಲ್ಲಿಯೇ ತೊಡಗಿರುವ ಈ ಸರ್ಕಾರದ ಯಾವುದೇ ಸಚಿವರು, ಶಾಸಕರು ಇದರ ಬಗ್ಗೆ ಗಮನ ನೀಡುತ್ತಿಲ್ಲ. ಉಸ್ತುವಾರಿ ಸಚಿವರಂತೂ ಬೆಂಗಳೂರು ಬಿಟ್ಟು ಹೊರಗೆ ಬರುತ್ತಿಲ್ಲ.

`ಸುವರ್ಣ ವಿಧಾನಸೌಧ ಕಟ್ಟಡದ ಕಾಮಗಾರಿ ಜೂ 15 ಕ್ಕೆ ಪೂರ್ಣಗೊಳ್ಳಬಹುದು. ಅಧಿವೇಶನಕ್ಕಾಗಿ ಟೇಬಲ್, ಕುರ್ಚಿಗಳನ್ನು ಅಳವಡಿಸಲಾಗುತ್ತಿದೆ. ಮುಖ್ಯ ಗೋಪುರದ ಕೆಲಸ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕಟ್ಟಡದ ಪ್ರಗತಿ ಬಗ್ಗೆ ಪ್ರತಿ ವಾರ ಮಾಹಿತಿ ಪಡೆಯುತ್ತಿದ್ದಾರೆ. ರಾಜ್ಯದಲ್ಲಿಯೇ ಇದೊಂದು ಮಾದರಿ ಕಟ್ಟಡ ಆಗಲಿದೆ~ ಎಂದು ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ವಿನಾಯಕ ಸುಗೂರ `ಪ್ರಜಾವಾಣಿ~ಗೆ ತಿಳಿಸಿದರು.

`ಮಳೆಗಾಲದ ವಿಧಾನಮಂಡಲ ಅಧಿವೇಶನ ಮಾಡಬಹುದು. ಸಭಾಂಗಣಗಳನ್ನು ಸಿದ್ಧಪಡಿಸಿ ನೀಡಲಾಗುವುದು. ಉದ್ಯಾನ ಹಾಗೂ ರಸ್ತೆಯ ಕೆಲಸ ಬಾಕಿ ಇದೆ. ಕೆಲಸ ಭರದಿಂದ ಸಾಗಿದ್ದು, ಸಧ್ಯದಲ್ಲಿಯೇ ಪೂರ್ಣಗೊಳ್ಳಲಿದೆ~ ಎನ್ನುತ್ತಾರೆ ಅವರು.

ಒಟ್ಟು 127 ಎಕರೆ ಪ್ರದೇಶದಲ್ಲಿ ನಾಲ್ಕು ಎಕರೆ ವಿಸ್ತೀರ್ಣದಲ್ಲಿ ಬೆಂಗಳೂರಿನ ವಿಧಾನಸೌಧದ ಮಾದರಿಯಲ್ಲಿಯೇ ಕಟ್ಟಲಾಗಿರುವ ಸುವರ್ಣ ವಿಧಾನಸೌಧದಲ್ಲಿ ಸಂಸತ್ ಭವನದಲ್ಲಿರುವಂತೆ  ಸೆಂಟ್ರಲ್ ಹಾಲ್ ಹಾಗೂ  ಸಭಾಂಗಣ ನಿರ್ಮಿಸಿರುವುದು ವಿಶೇಷ.

450 ಆಸನಗಳ ಸಾಮರ್ಥ್ಯ ಹೊಂದಿರುವ ಸೆಂಟ್ರಲ್ ಹಾಲ್‌ನಲ್ಲಿ ಜಂಟಿ ಅಧಿವೇಶನ ಸಹ ಮಾಡಬಹುದು. ಈ ಹಾಲ್‌ಗೆ ಅಂತಿಮ ರೂಪ ಕೊಡುವ ಕೆಲಸ ನಡೆದಿದೆ. ಸಚಿವರಿಗಾಗಿ 38 ಚೇಂಬರ್‌ಗಳು, 300 ಆಸನಗಳ ಸಾಮರ್ಥ್ಯವುಳ್ಳ ವಿಧಾನಸಭೆ ಅಧಿವೇಶನ ಸಭಾಂಗಣ, 100 ಆಸನಗಳ ಸಾಮರ್ಥ್ಯವಿರುವ ವಿಧಾನ ಪರಿಷತ್ ಅಧಿವೇಶನದ ಸಭಾಂಗಣ, ಉಪಸಮಿತಿಗಾಗಿ 14 ಮೀಟಿಂಗ್ ಹಾಲ್‌ಗಳು ನಿರ್ಮಾಣಗೊಳ್ಳುತ್ತಿವೆ. 300 ಆಸನಗಳ ಸಾಮರ್ಥ್ಯವಿರುವ ಸಭಾಗೃಹ ಸಹ ಸಿದ್ಧಗೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.