ADVERTISEMENT

ಅನಿಲ್‌ ಲಾಡ್‌ ಪತ್ನಿಯಿಂದ ಉಡಿ ತುಂಬುವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
ರವಿಕೆ ಪ್ಯಾಕೆಟ್‌ಗಳಿಗಾಗಿ ಮಹಿಳೆಯರು ಮುಗಿಬಿದ್ದಿರುವುದು
ರವಿಕೆ ಪ್ಯಾಕೆಟ್‌ಗಳಿಗಾಗಿ ಮಹಿಳೆಯರು ಮುಗಿಬಿದ್ದಿರುವುದು   

ಬಳ್ಳಾರಿ: ಶಾಸಕ ಅನಿಲ್ ಲಾಡ್ ಅವರ ಪತ್ನಿ ಆರತಿ ಲಾಡ್ ಅವರು ಭಾನುವಾರ ಇಲ್ಲಿನ ವಾರ್ಡ್ಲಾ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಉಡಿ ತುಂಬುವ ಕಾರ್ಯಕ್ರಮ ಆಯೋಜಿಸಿದ್ದರು.

ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ರವಿಕೆ, ಬಳೆ ಹಾಗೂ ಹಣ್ಣಿನ ಪೊಟ್ಟಣಗಳನ್ನು ತೆಗೆದುಕೊಳ್ಳಲು ಮುಗಿಬಿದ್ದುದರಿಂದ ಭಾರಿ ನೂಕು ನುಗ್ಗಲು ಉಂಟಾಗಿತ್ತು.

ಒಂದೆಡೆ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಿಕೆಯಿಂದ ತುಸು ದೂರದಲ್ಲಿ ಕಾರ್ಯಕ್ರಮದ ಬಳಿಕ ವಿತರಿಸಲು ರವಿಕೆ, ಬಳೆ, ಹಣ್ಣುಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಈ ವಿಷಯ ತಿಳಿದ ಮಹಿಳೆಯರು ಒಬ್ಬೊಬ್ಬರಾಗಿಯೇ ಅಲ್ಲಿಗೆ ಹೋದರು. ಸಾಲು ಬೆಳೆಯುತ್ತ ಹೋದಂತೆ ಕಾರ್ಯಕ್ರಮದ ಆಯೋಜಕರು ರವಿಕೆ, ಬಳೆ, ಹಣ್ಣು ಕೊಡಲು ತಡಮಾಡಿದರು.

ADVERTISEMENT

ಕಾದು ಕಾದು ಸುಸ್ತಾದ ಮಹಿಳೆಯರು ತಾವಾಗಿಯೇ ನುಗ್ಗಿ ಅವುಗಳನ್ನು ಪಡೆದರು. ಈ ವೇಳೆ ನೂಕಾಟ, ತಳ್ಳಾಟ ಸೃಷ್ಟಿಯಾಗಿತ್ತು. ಕೆಲವರು ತಾವು ತೆಗೆದುಕೊಂಡದ್ದಲ್ಲದೇ ಬೇರೆಯವರತ್ತ ತೂರಿದರು. ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಪೊಲೀಸರು ಹಾಗೂ ಆಯೋಜಕರು ಅಲ್ಲಿಯೇ ಇದ್ದರೂ ಮಹಿಳೆಯರನ್ನು ನಿಯಂತ್ರಿಸುವ ಗೋಜಿಗೆ ಹೋಗಲಿಲ್ಲ. ಇದರಿಂದ ಅಲ್ಲಿದ್ದ ವಸ್ತುಗಳು, ಹಣ್ಣುಗಳು ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೆಲವರಿಗೆ ಏನೂ ಸಿಗದ ಕಾರಣ ಹಿಡಿಶಾಪ ಹಾಕುತ್ತ ಹೋದರು.

ಕಾರ್ಯಕ್ರಮಕ್ಕೆ ಬಂದವರಿಗಾಗಿ ಸಸ್ಯಾಹಾರ ಹಾಗೂ ಮಾಂಸಾಹಾರ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಯೂ ಜನದಟ್ಟಣೆ ಕಂಡು ಬಂತು.
ಈ ಕುರಿತು ಶಾಸಕ ಅನಿಲ್‌ ಲಾಡ್‌, ಅವರ ಪತ್ನಿ ಆರತಿ ಲಾಡ್‌ ಅವರನ್ನು ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.