ADVERTISEMENT

`ಅನುದಾನ ದುರ್ಬಳಕೆ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ'

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 19:59 IST
Last Updated 5 ಜುಲೈ 2013, 19:59 IST

ಬೆಂಗಳೂರು: ಐದು ವರ್ಷಗಳ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅನುದಾನ ದುರ್ಬಳಕೆ ಕುರಿತು ಲೋಕಾಯುಕ್ತ ತನಿಖೆ ನಡೆಯುತ್ತಿದೆ. ತನಿಖಾ ವರದಿ ಕೈಸೇರಿದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ತಿಳಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಶುಕ್ರವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. ಪ್ರಕರಣದಲ್ಲಿ ಎಷ್ಟೇ ದೊಡ್ಡವರು ಭಾಗಿಯಾಗಿದ್ದರೂ ಕ್ರಮ ಜರುಗಿಸುವುದು ನಿಶ್ಚಿತ. ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

`ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕರ್ನಾಟಕದ ಸಂಸ್ಕೃತಿ  ರಕ್ಷಿಸುವ ಹೊಣೆಗಾರಿಕೆ ಇದೆ. ಇಂತಹ ಇಲಾಖೆಯ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸುವ ಪರಿಸ್ಥಿತಿ ನಿರ್ಮಾಣ ಆಗಿರುವುದು ಕನ್ನಡಿಗರ ಪಾಲಿಗೆ ಅವಮಾನದ ಸಂಗತಿ. ಇಲಾಖೆಯಲ್ಲಿ ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ಸ್ಪಷ್ಟವಾದ ನೀತಿ  ರೂಪಿಸುವ ಅಗತ್ಯ ಇದೆ. ಇಲ್ಲಿಯೂ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಧಾರದಲ್ಲಿ ಅನುದಾನ ಹಂಚಿಕೆ ಆಗಬೇಕು. ಈ ದಿಸೆಯಲ್ಲಿ ಪರಿಶೀಲನೆ ನಡೆಸುತ್ತಿದ್ದೇವೆ' ಎಂದರು.

`ರಂಗ ಸಮಾಜಕ್ಕೆ ಹೊಸ ಸದಸ್ಯರನ್ನು ಶೀಘ್ರದಲ್ಲಿ ನೇಮಕ ಮಾಡಲಾಗುವುದು. ರಂಗ ಸಮಾಜದ ಅಭಿಪ್ರಾಯ ಆಧರಿಸಿಯೇ ರಂಗಾಯಣದ ನಿರ್ದೇಶಕರನ್ನು ನೇಮಕ ಮಾಡಲಾಗುವುದು. ರಂಗಾಯಣ ಬಿ.ವಿ.ಕಾರಂತರ ಕನಸಿನ ಕೂಸು. ಅವರ ಕನಸಿನಂತೆಯೇ ಅದು ಮುನ್ನಡೆಯಬೇಕು. ಅದಕ್ಕೆ ಪೂರಕವಾಗಿ ಸರ್ಕಾರ ಎಲ್ಲಾ ಸಹಕಾರ ನೀಡಲಿದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೊಸ ಸ್ವರೂಪ ಅಗತ್ಯ:ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಗೆ ಹೊಸ ಸ್ವರೂಪ ನೀಡುವ ಅಗತ್ಯ ಇದೆ. ದೇವದಾಸಿ ಮಹಿಳೆಯರಿಗೆ ಕೇವಲ ಮಾಸಾಶನ ನೀಡಿದರೆ ಸಾಲದು. ಜಮೀನು, ವಸತಿ ಸೌಲಭ್ಯಗಳನ್ನೂ ಕಲ್ಪಿಸಬೇಕಿದೆ. ದೇವದಾಸಿ ಮಹಿಳೆಯರ ಮಕ್ಕಳು ಈಗ ಶಿಕ್ಷಣದತ್ತ ಒಲವು ತೋರುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನೂ ಆಧರಿಸಿ ಪುನರ್ವಸತಿ ಯೋಜನೆಗೆ ಹೊಸ ಸ್ವರೂಪ ನೀಡಲಾಗುವುದು ಎಂದು ಉಮಾಶ್ರೀ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.