ADVERTISEMENT

ಅನುದಾನ ನೀಡಿ- ಇಲ್ಲವೇ ಮುಚ್ಚಿಬಿಡಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2011, 19:30 IST
Last Updated 23 ಮಾರ್ಚ್ 2011, 19:30 IST


ಯಾದಗಿರಿ: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳ ನಿರ್ವಹಣೆ ಮತ್ತು ಸಿಬ್ಬಂದಿ ವೇತನಕ್ಕೂ ಹಣವಿಲ್ಲದೇ ಪರದಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ.

“ಅನುದಾನ ಬಿಡುಗಡೆ ಸಾಧ್ಯವಾಗದಿದ್ದಲ್ಲಿ ಇಲಾಖೆಯ ವಿವಿಧ ಸಂಸ್ಥೆಗಳನ್ನು ಮುಚ್ಚಲು ಅನುಮತಿ ಕೊಡಿ” ಎಂದು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಯಾದಗಿರಿ ಜಿಲ್ಲೆಯು ಗುಲ್ಬರ್ಗದಿಂದ ವಿಭಜನೆ ಆದ ನಂತರ ಜಿಲ್ಲೆಯ ಮೂರು ತಾಲ್ಲೂಕುಗಳಿಗೆ ಬೇಕಾಗುವಷ್ಟು ಅನುದಾನವನ್ನು ಲಿಂಕ್ ಡಾಕ್ಯುಮೆಂಟ್‌ನಲ್ಲಿ ಸರಿಯಾಗಿ ವಿಭಜನೆ ಮಾಡದೇ ಇರುವುದರಿಂದ ಸಮಾಜ ಕಲ್ಯಾಣ ಇಲಾಖೆಯು ಅನುದಾನದ ಕೊರತೆ ಎದುರಿಸುತ್ತಿದೆ.

ಜಿಲ್ಲಾ ಪಂಚಾಯಿತಿ ಯೋಜನೇತರ ವೆಚ್ಚದ ಅಡಿಯಲ್ಲಿ 2 ವಸತಿ ಶಾಲೆಗಳು, 2 ಆಶ್ರಮ ಶಾಲೆಗಳ ನಿರ್ವಹಣೆಗೆ ವಾಸ್ತವವಾಗಿ ಒಟ್ಟು 107.37 ಲಕ್ಷ ಅನುದಾನ ಬೇಕಾಗಿದ್ದು, ನೀಡಿರುವ ಅನುದಾನ ಕೇವಲ ರೂ.2 ಲಕ್ಷ. ತಾಲ್ಲೂಕು ಪಂಚಾಯಿತಿ ಯೋಜನೇತರ ವೆಚ್ಚದ ಅಡಿಯಲ್ಲಿ 250 ಸಂಖ್ಯಾಬಲ ಇರುವ ವಸತಿ ಶಾಲೆಗೆ ರೂ. 44.22 ಲಕ್ಷ ಅನುದಾನ ಬೇಕಾಗಿದ್ದು, ಇದಕ್ಕಾಗಿ ಒದಗಿಸಿದ ಅನುದಾನ ಕೇವಲ ರೂ.ಒಂದು ಲಕ್ಷ!

ಅನುದಾನದ ಕೊರತೆಯಿಂದಾಗಿ ಹೊರಗುತ್ತಿಗೆ ಪಡೆಯಲಾದ ಗ್ರೂಪ್ ‘ಡಿ’ ನೌಕರರ ವೇತವನ್ನು ಕಳೆದ 8 ತಿಂಗಳಿಂದ ಪಾವತಿಸಲೂ ಆಗಿಲ್ಲ. ಇದರಿಂದಾಗಿ ವಸತಿ ನಿಲಯಗಳು, ವಸತಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಗ್ರೂಪ್ ಡಿ ನೌಕರರು ಕೆಲಸ ಮಾಡದೇ ಪದೇ ಪದೇ ಮೇಲಧಿಕಾರಿಗಳ ಕಚೇರಿಗಳಲ್ಲಿ ಮುಷ್ಕರ ಹೂಡುವಂತಾಗಿದೆ. ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳು ಊಟ ಇಲ್ಲದೇ ಬೀದಿಗಳಿಯುವ ಸಾಧ್ಯತೆಗಳಿವೆ ಎಂದು ಜಿಲ್ಲಾಧಿಕಾರಿಗಳೇ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಯೋಜನ ಆಗದ ಪತ್ರ ವ್ಯವಹಾರ: ಸಮಾಜ ಕಲ್ಯಾಣ ಇಲಾಖೆಗೆ ಕೊರತೆಯಾಗಿರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಎಲ್ಲರೂ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಇದುವರೆಗೂ ಕೊರತೆ ತುಂಬಿಸಲು ಅನುದಾನ ಜಿಲ್ಲೆಗೆ ಬಂದಿಲ್ಲ.

ಇತ್ತೀಚೆಗಷ್ಟೇ ಜಿಲ್ಲಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ, ಕೊರತೆಯಾಗುವ ಅನುದಾನವನ್ನು ಶೀಘ್ರ ಬಿಡುಗಡೆ ಮಾಡದಿದ್ದರೆ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಸಂಸ್ಥೆಗಳನ್ನು ಮುಚ್ಚುವ ಅನಿವಾರ್ಯತೆ ಉಂಟಾಗಲಿದೆ. ಕೊರತೆ ಬೀಳುವ ಅನುದಾನವನ್ನು ಬಿಡುಗಡೆ ಮಾಡಲು ಸಾಧ್ಯವಾಗದಿದ್ದರೇ ಈ ಸಂಸ್ಥೆಗಳನ್ನು ಮುಚ್ಚಲು ಅನುಮತಿ ನೀಡುವಂತೆಯೂ ಕೋರಿದ್ದಾರೆ.

ಇದರ ಜೊತೆಗೆ ವಸತಿ ನಿಲಯಗಳು ಪ್ರಾರಂಭ ಆದಾಗಿನಿಂದಲೂ ವಸತಿ ನಿಲಯಗಳಿಗೆ ಆಹಾರ ಧಾನ್ಯ ಸರಬರಾಜು ಮಾಡಿದವರಿಗೆ ಹಣ ಪಾವತಿಯಾಗಿಲ್ಲ. ಇವರೂ ಕೂಡ ಈ ತಿಂಗಳಿಂದ ಆಹಾರ ಧಾನ್ಯ ಸರಬರಾಜು ನಿಲ್ಲಿಸುವುದಾಗಿ ತಿಳಿಸಿದ್ದಾರೆಂದು ಪತ್ರದಲ್ಲಿ ವಿವರಿಸಿದ್ದಾರೆ.

ವಸತಿ ನಿಲಯಗಳ ಲೆಕ್ಕ ಶೀರ್ಷಿಕೆಯಲ್ಲಿ ಅನುದಾನದ ಲಭ್ಯವಿಲ್ಲದೇ ಇರುವುದರಿಂದ ಫಿನೈಲ್, ಸ್ವಚ್ಛತಾ ಸಾಮಗ್ರಿಗಳು ಸೇರಿದಂತೆ ಸಣ್ಣಪುಟ್ಟ ಖರ್ಚಿನ ಬಿಲ್‌ಗಳು ಖಜಾನೆಗಳಲ್ಲಿ ಪಾಸಾಗಿಲ್ಲ. ಇದರಿಂದ ವಸತಿ ನಿಲಯಗಳಲ್ಲಿ ಆರೋಗ್ಯಕರ ವಾತಾವರಣ ಹಾಗೂ ಮಕ್ಕಳ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ವೇತನವಿಲ್ಲದ ಸಿಬ್ಬಂದಿ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಟ್ಟು 9 ಹುದ್ದೆಗಳಿದ್ದು, ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿರುವವರು ಕೇವಲ ನಾಲ್ಕು ಜನರು. ಆದರೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸೇರಿದಂತೆ ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೇ ಕಳೆದ 9 ತಿಂಗಳಿಂದ ವೇತನವಿಲ್ಲದೇ ಪರದಾಡುವಂತಾಗಿದೆ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಸಿಪಾಯಿಗೂ ವೇತನ ಸಿಗದೇ ಇರುವುದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಹೀಗಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ದಿಕ್ಕು ತೋಚದಂತಾಗಿದ್ದಾರೆ. ವೇತನ ಸಿಗದೇ ಪರದಾಡುವ ಸಿಬ್ಬಂದಿ ಒಂದೆಡೆಯಾದರೆ, ಅನುದಾನವಿಲ್ಲದೇ ವಸತಿ ನಿಲಯಗಳು, ವಸತಿ ಶಾಲೆಗಳ ನಿರ್ವಹಣೆಯನ್ನೂ ಮಾಡಲಾಗದ ಸ್ಥಿತಿ ಬಂದೊದಗಿದೆ.

ಇದೀಗ ಹೊಸ ಜಿಲ್ಲೆಯನ್ನು ರಚನೆ ಮಾಡಿದ ಸರ್ಕಾರದ ಹೊಸ ವರ್ಷದ (2011-12) ಲಿಂಕ್ ಡಾಕ್ಯುಮೆಂಟ್‌ನಲ್ಲೂ ಸಮಾಜ ಕಲ್ಯಾಣ ಇಲಾಖೆಯ ಕೆಲವೊಂದು ಯೋಜನೆಗಳೂ ಜಿಲ್ಲೆಯ ಕೈತಪ್ಪಿವೆ ಎಂಬ ಮಾಹಿತಿಯನ್ನು ಇಲಾಖೆಯೇ ಸಿಬ್ಬಂದಿ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.