ಮೈಸೂರು: ‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನವನ್ನು ಜಿಲ್ಲಾ ಪಂಚಾಯಿತಿಗಳು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಮುಂದಾಗಬೇಕು’ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿ ವೃದ್ಧಿ ಸಚಿವ ಜಗದೀಶ್ ಶೆಟ್ಟರ್ ಮಂಗಳವಾರ ಕರೆ ನೀಡಿದರು.
ನಗರದಲ್ಲಿರುವ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ರಾಜ್ಯದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರುಗಳಿಗೆ 9 ದಿನಗಳ ಕಾಲ ಏರ್ಪಡಿಸಿರುವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಜಿಲ್ಲಾ ಪಂಚಾಯಿತಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ನೂರಾರು ಕೋಟಿ ರೂಪಾಯಿಗಳ ಅನುದಾನ ಹರಿದು ಬರುತ್ತಿದೆ.
ಇದನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಆಗ ಮಾತ್ರ ಹಳ್ಳಿಗಳ ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದು ಹೇಳಿದರು.
‘ಜಿಲ್ಲಾ ಪಂಚಾಯಿತಿ ಅಧ್ಯಕ್ಷರುಗಳು ಪಂಚಾಯತ್ ರಾಜ್ ಕಾಯ್ದೆಯನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಸಾಮಾನ್ಯ ಸಭೆಗಳನ್ನು ನಡೆಸುವ ರೀತಿ, ಕ್ರಿಯಾ ಯೋಜನೆ ತಯಾರಿಸುವುದು, ನಿರ್ಣಯ ಕೈಗೊಳ್ಳುವುದು, ಸಾಮಾನ್ಯ ಸಭೆಯಲ್ಲಿ ಯಾವ ವಿಚಾರಗಳನ್ನು ಪ್ರಸ್ತಾಪವಾಗಬೇಕು ಎನ್ನುವುದನ್ನು ತರಬೇತಿಯಲ್ಲಿ ತಿಳಿದುಕೊಳ್ಳಬೇಕು.
ಆಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರುಗಳು ಆಯಾ ಜಿಲ್ಲೆಯ ನಾಯಕರು. ಇದನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.‘ರಾಜ್ಯ ಸರ್ಕಾರ ಜಿಲ್ಲಾ ಪಂಚಾಯಿತಿಗಳಿಗೆ ಅನುದಾನ ನೀಡುವಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡುವುದಿಲ್ಲ. ಎಲ್ಲರೂ ಒಟ್ಟಾಗಿ ಸೇರಿ ಜಿಲ್ಲಾ ಪಂಚಾಯಿತಿ ವ್ಯವಸ್ಥೆಯ ಸುಧಾರಣೆಗೆ ಶ್ರಮಿಸಬೇಕು.
ಇಡೀ ದೇಶದಲ್ಲಿ ಕರ್ನಾಟಕ ಮತ್ತು ಕೇರಳದಲ್ಲಿ ಮಾತ್ರ ಪಂಚಾಯತ್ ರಾಜ್ ವ್ಯವಸ್ಥೆ ಯಶಸ್ವಿಯಾಗಿದೆ. ಈ ವ್ಯವಸ್ಥೆ ಇನ್ನೂ ಉತ್ತಮಗೊಳ್ಳಬೇಕು. ಆದ್ದರಿಂದ ರಾಜ್ಯದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರುಗಳನ್ನು ಮಾರ್ಚ್ 23 ರಿಂದ ನಾಲ್ಕು ದಿನ ಕೇರಳಕ್ಕೆ ಅಧ್ಯಯನಕ್ಕಾಗಿ ಪ್ರವಾಸ ಕಳುಹಿಸಲಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.