ADVERTISEMENT

ಅಪಘಾತ: ಗೋಸಾಯಿ ಮಠ ಸ್ವಾಮೀಜಿ ಸಾವು

​ಪ್ರಜಾವಾಣಿ ವಾರ್ತೆ
Published 27 ಜುಲೈ 2013, 19:59 IST
Last Updated 27 ಜುಲೈ 2013, 19:59 IST
ಗೋಸಾಯಿ ಮಠದ ಸುರೇಶ್ವರಾನಂದ ಭಾರತಿ ಸ್ವಾಮೀಜಿ ಅವರು ಪ್ರಯಾಣಿಸುತ್ತಿದ್ದ ಕಾರು
ಗೋಸಾಯಿ ಮಠದ ಸುರೇಶ್ವರಾನಂದ ಭಾರತಿ ಸ್ವಾಮೀಜಿ ಅವರು ಪ್ರಯಾಣಿಸುತ್ತಿದ್ದ ಕಾರು   

ಚಿತ್ರದುರ್ಗ: ತಾಲ್ಲೂಕಿನ ಬೀರಾವರ ಸಮೀಪ ಶನಿವಾರ ಮಧ್ಯಾಹ್ನ ಕಾರು ಮತ್ತು ಖಾಸಗಿ ಬಸ್ ಡಿಕ್ಕಿಯಾಗಿ ಬೆಂಗಳೂರಿನ ಗವಿಪುರ ಗೋಸಾಯಿ ಮಠದ ಸುರೇಶ್ವರಾನಂದ ಭಾರತಿ ಸ್ವಾಮೀಜಿ (54) ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಕಾರಿನ ಚಾಲಕ ಅಭಿಷೇಕ್ ಹಾಗೂ ಸ್ವಾಮೀಜಿ ಅವರ ಶಿಷ್ಯ ಗಂಗಾಧರ್ ಅವರಿಗೆ ಗಾಯಗಳಾಗಿವೆ.

ಘಟನೆ ಹಿನ್ನೆಲೆ: ಸ್ವಾಮೀಜಿ ಅವರು ಕಾರಿನಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದರು. ಜಗಳೂರು ಕಡೆ ಹೊರಟಿದ್ದ ಖಾಸಗಿ ಬಸ್ ಏಕಾಏಕಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಜಗಳೂರು ರಸ್ತೆಗೆ ತಿರುವು ಪಡೆದಾಗ ಈ ಅಪಘಾತ ಸಂಭವಿಸಿತು.

`ಸ್ವಾಮೀಜಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಮುಂಡುವಾಡ ಗ್ರಾಮದವರು. ಹಳಿಯಾಳದ ಬಳಿ ಶಾಖಾ ಮಠ ತೆರೆಯಬೇಕೆನ್ನುವುದು ಅವರ ಬಹು ದಿನಗಳ ಕನಸಾಗಿತ್ತು. ಅದಕ್ಕಾಗಿ ಆಗಾಗ ಅಲ್ಲಿಗೆ ಹೋಗುತ್ತಿದ್ದರು. ಇಂದು ಸಹ ಅದಕ್ಕಾಗಿಯೇ ಹೋಗುತ್ತಿದ್ದಾಗ ದುರ್ಘಟನೆ ನಡೆಯಿತು' ಎಂದು ಚಾಲಕ ಅಭೀಷೇಕ್ ತಿಳಿಸಿದರು.

ಸಿರಿಗೆರೆ ಶಿವಮೂರ್ತಿ ಶಿವಾಚಾರ್ಯರು, ಚಿತ್ರದುರ್ಗದ ಮುರುಘಾ ಶರಣರು, ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ, ಕಬೀರಾನಂದ ಮಠದ ಶಿವಲಿಂಗಾನಂದ ಸ್ವಾಮೀಜಿ, ಮಾದಾರ ಚನ್ನಯ್ಯ ಗುರು ಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ, ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಎಸ್‌ಪಿ ಡಾ.ವೈ.ಎಸ್. ರವಿಕುಮಾರ್ ಮತ್ತಿತರರು ಸ್ವಾಮೀಜಿಯ ಅಂತಿಮ ದರ್ಶನ ಪಡೆದರು.

6ನೇ ಗುರು: ಸ್ವಾಮೀಜಿ ಅವರು  ಮರಾಠ ಸಮಾಜಕ್ಕೆ 6ನೇ ಜಗದ್ಗುರುಗಳು. ಅವರು 1996ರಲ್ಲಿ ಪೀಠಾಧಿಪತಿಯಾದರು.

ಇಂದು ಬೆಂಗಳೂರಿನಲ್ಲಿ ಅಂತ್ಯಕ್ರಿಯೆ
ಬೆಂಗಳೂರು: ಸುರೇಶ್ವಾರನಂದ ಸ್ವಾಮೀಜಿ ಅವರ ಅಂತ್ಯಕ್ರಿಯೆ ಭಾನುವಾರ (ಜುಲೈ 28) ಸಂಜೆ 4.30ರ ಸುಮಾರಿಗೆ ಇಲ್ಲಿ ನಡೆಯಲಿದೆ.

ಇದಕ್ಕೂ ಮುನ್ನ ಮಧ್ಯಾಹ್ನ 12 ಗಂಟೆ ವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಬಳಿಕ ಗವಿಪುರದಲ್ಲಿ ಮೆರವಣಿಗೆ ನಡೆಯಲಿದೆ ಎಂದು ಮಠದ ಖಜಾಂಜಿ ವೆಂಕೋಬ ರಾವ್ ಶಿಂದೆ ತಿಳಿಸಿದರು.

ಸ್ವಾಮೀಜಿ ನಿಧನದ ವಾರ್ತೆ ತಿಳಿದು ಮಠದಲ್ಲಿ ಶೋಕ ಆವರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT