ADVERTISEMENT

ಅಭಯ ಗೋಯಾತ್ರೆಗೆ ಚಾಲನೆ ನಾಳೆ

ಗೋಹತ್ಯೆ ನಿಷೇಧಕ್ಕೆ ಆಗ್ರಹ ; ಹಕ್ಕೊತ್ತಾಯ ಮಂಡನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 19:30 IST
Last Updated 1 ಡಿಸೆಂಬರ್ 2017, 19:30 IST
ಅಭಯ ಗೋಯಾತ್ರೆಗೆ ಚಾಲನೆ ನಾಳೆ
ಅಭಯ ಗೋಯಾತ್ರೆಗೆ ಚಾಲನೆ ನಾಳೆ   

ಕಾರವಾರ: ‘ಗೋಹತ್ಯೆ ನಿಷೇಧ ಮತ್ತು ಭಾರತೀಯ ಗೋ ತಳಿಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹಕ್ಕೊತ್ತಾಯ ಮಂಡಿಸಲು ಹಮ್ಮಿಕೊಂಡಿರುವ ಅಭಯ ಗೋಯಾತ್ರೆ ರಾಜ್ಯದಾದ್ಯಂತ ಸಂಚ ರಿಸಲಿದೆ’ ಎಂದು ಭಾರತೀಯ ಗೋ ಪರಿವಾರದ ಕೋಶಾಧ್ಯಕ್ಷ ಮುರಳೀಧರ ಪ್ರಭು ಹೇಳಿದರು.

ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಮಟಾದ ಕೊಂಕಣ ಎಜುಕೇಷನ್‌ ಟ್ರಸ್ಟ್‌ ಮೈದಾನದಲ್ಲಿ ಇದೇ 3ರಂದು ಈ ಯಾತ್ರೆಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಚಾಲನೆ ನೀಡುವರು’ ಎಂದರು.

‘ಶಿವಮೊಗ್ಗದ ಕೂಡ್ಲಿ ಶೃಂಗೇರಿಮಠ ಮಹಾಸಂಸ್ಥಾನದ ಶ್ರೀವಿದ್ಯಾಭಿನವ ವಿದ್ಯಾರಣ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. 30 ಸಾವಿರಕ್ಕೂ ಅಧಿಕ ಗೋ ಪ್ರೇಮಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಭಯಾಕ್ಷರ ಅರ್ಜಿಗಳ ಮೆರವಣಿಗೆ ನಡೆಯಲಿದೆ’ ಎಂದರು.

ADVERTISEMENT

ಬೆಂಗಳೂರಿನಲ್ಲಿ ಸಮಾರೋಪ: ‘48 ದಿನಗಳ ಈ ಯಾತ್ರೆಯು ರಾಜ್ಯದ 30 ಜಿಲ್ಲೆಗಳಲ್ಲೂ ಸಂಚರಿಸಿ, ಜ. 21ರಂದು ಬೆಂಗಳೂರಿನಲ್ಲಿ ಸಮಾರೋಪ
ಗೊಳ್ಳಲಿದೆ. 4 ಸಾವಿರ ಕಿ.ಮೀ ಸಂಚರಿಸುವ ಈ ಯಾತ್ರೆಯಲ್ಲಿ ರಾಘವೇಶ್ವರ ಶ್ರೀ ಅವರೊಂದಿಗೆ 50 ಮಂದಿ ಗೋ ಪ್ರೇಮಿಗಳು ಜತೆಗೆ ಇರಲಿದ್ದಾರೆ. ಅಲ್ಲದೇ ಆಯಾ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

ಹಸ್ತಾಕ್ಷರ ಅಭಿಯಾನ: ‘ರಾಜ್ಯದಲ್ಲಿನ ಪ್ರತಿ ಮನೆ ತಲುಪುವ ಅಭಯಾಕ್ಷರ ಅಭಿಯಾನದಲ್ಲಿ ಸುಮಾರು 5 ಕೋಟಿ ಗೂ ಅಧಿಕ ಮಂದಿ ಗೋ ಸಂರಕ್ಷಣೆ ಪರವಾಗಿ ಹಸ್ತಾಕ್ಷರ ನೀಡುವ ನಿರೀಕ್ಷೆಯಿದೆ. ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಗೆ ಸಲ್ಲಿಸುವ ಪ್ರತ್ಯೇಕ ಹಕ್ಕೊತ್ತಾಯ ಪತ್ರಗಳಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 5 ಲಕ್ಷ ಮಂದಿ ಈಗಾಗಲೇ ಸಹಿ ಮಾಡಿದ್ದಾರೆ. ಎಲ್ಲವನ್ನು ಮುಂದಿನ ಮಾರ್ಚ್ ತಿಂಗಳಾಂತ್ಯಕ್ಕೆ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.