ADVERTISEMENT

ಅಮೆರಿಕದ ಮಹಿಳಾ ವಿಜ್ಞಾನಿಗೆ ಕಾಸ್ಪರ್ ಪುರಸ್ಕಾರ ಪ್ರದಾನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 19:30 IST
Last Updated 16 ಜುಲೈ 2012, 19:30 IST

ಮೈಸೂರು: ಅಮೆರಿಕದ ಬಾಹ್ಯಾಕಾಶ ವಿಜ್ಞಾನಿ ಜೆನೆತ್ ಲೂಮನ್ ಅವರಿಗೆ ಕಾಸ್ಪರ್ ಬಾಹ್ಯಾಕಾಶ ವಿಜ್ಞಾನ ಪುರಸ್ಕಾರವನ್ನು ಸೋಮವಾರ ನೀಡಿ ಗೌರವಿಸಲಾಯಿತು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಶ್ರಯದಲ್ಲಿ ಇನ್ಫೋಸಿಸ್‌ನ ಡಾ. ಎನ್.ಆರ್. ನಾರಾಯಣಮೂರ್ತಿ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ನಡೆಯುತ್ತಿರುವ 39ನೇ ಕಾಸ್ಪರ್ (ಬಾಹ್ಯಾಕಾಶ ಸಂಶೋಧನಾ ಸಮಿತಿ) ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಕಾಸ್ಪರ್ ಅಧ್ಯಕ್ಷ ಡಾ. ಜಿವೋನಿ ಎಫ್. ಬಿನ್ಯಾನಿ ಅವರು ನೀಡಿ ಗೌರವಿಸಿದರು.  ಜೆನೆತ್ ಅವರು ಬಾಹ್ಯಾಕಾಶ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಮಾಡಿದ ಅತ್ಯುತ್ತಮ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಯಿತು.  

ಇದೇ ಕಾರ್ಯಕ್ರಮದಲ್ಲಿ ಭಾರತೀಯ ಮೂಲದ ವಿಜ್ಞಾನಿ ಜದುನಂದನ್ ದಾಸ್ ಯಕೋವಾ ಎಲ್ಡೋವಿಚ್ ಪದಕ ವಿಭಾಗದಲ್ಲಿ ಕಾಸ್ಪರ್ ಸೈಂಟಿಫಿಕ್ ಕಮಿಷನ್ ಎ ಗೌರವವನ್ನು ಗಳಿಸಿದರು. `ಇಸ್ರೊ~ದ ಸಹಭಾಗಿತ್ವದಲ್ಲಿ ನೀಡಲಾಗುವ ವಿಕ್ರಂ ಸಾರಾಭಾಯಿ ಪದಕವನ್ನು ಮೆಕ್ಸಿಕೋದ ವಿಜ್ಞಾನಿ ರಫೆಲ್ ನವೆರೋ ಗೋನ್ಸಾಲ್ವಿಸ್ ಅವರಿಗೆ ನೀಡಲಾಯಿತು.

ADVERTISEMENT

`ಇಸ್ರೊ~ ಅಧ್ಯಕ್ಷ ಕೆ. ರಾಧಾಕೃಷ್ಣನ್, ಫಿಸಿಕಲ್ ಸಂಶೋಧನೆ ಪ್ರಯೋಗಾಲಯ (ಪಿಆರ್‌ಎಲ್) ಅಧ್ಯಕ್ಷ ಪ್ರೊ. ಯು.ಆರ್. ರಾವ್ ಮತ್ತಿತರರು ಹಾಜರಿದ್ದರು. ಜುಲೈ 22ರವರೆಗೆ ನಡೆಯಲಿರುವ ಈ ಸಮ್ಮೇಳನದಲ್ಲಿ 70 ದೇಶಗಳ 1750 ವಿಜ್ಞಾನಿಗಳು ಮತ್ತು 350 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. 

ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದವರು: ಜೆನೆತ್ ಲೂಮನ್ (ಅಮೆರಿಕ- ಕಾಸ್ಪರ್ ಬಾಹ್ಯಾಕಾಶ ವಿಜ್ಞಾನ ಪುರಸ್ಕಾರ), ರೋಜರ್ ಮೌರಿಸ್ ಬೋನೆ (ಫ್ರಾನ್ಸ್-ಕಾಸ್ಪರ್ ಅಂತರರಾಷ್ಟ್ರೀಯ ಸಹಕಾರ ಪದಕ), ಹಾರ್ಬಟ್ ಫಿಷರ್ (ಜರ್ಮನಿ-ಕಾಸ್ಪರ್ ವಿಲಿಯಂ ನಾರ್ಡ್‌ಬರ್ಗ್ ಪದಕ), ನೀಲ್ ಗ್ಯಾರಿಸ್ (ಯುಎಸ್‌ಎ- ಕಾಸ್ಪರ್ ಹ್ಯಾರಿ ಮೆಸ್ಸಿ ಪುರಸ್ಕಾರ), ಪೀಟರ್ ವಿಲ್ಮೋರ್ (ಯುನೈಟೆಡ್ ಕಿಂಗ್‌ಡಂ -ಕಾಸ್ಪರ್ ವಿಸ್ತೃತ ಕಾರ್ಯನಿರ್ವಹಣೆ ಪದಕ),  ರಫೆಲ್ ನವೆರೋ ಗೋನ್ಸಾಲ್ವಿಸ್ (ಮೆಕ್ಸಿಕೊ -ವಿಕ್ರಂ ಸಾರಾಭಾಯಿ ಪದಕ), ರಾಬರ್ಟ್ ಪಿ. ಲಿನ್ (ಅಮೆರಿಕ -ಜಿಯಾಂಗ್ ಜ್ಹಾ ಪುರಸ್ಕಾರ),  ಯಕೋವ್ ಎಲ್ಡೋವಿಚ್ ಪದಕ ವಿಭಾಗ: ಜದುನಂದನ್ ದಾಸ್ (ಭಾರತ/ಯುಕೆ), ಬೆಥ್ನೆ ಎಲ್ ಹಿಮನ್ (ಯುಎಸ್‌ಎ),ತುಷಿರೋ ಯೊಕೊಯಾಮಾ (ಜಪಾನ್), ಜೋನಾಥನ್ ಪಿ. ಈಸ್ಟ್‌ವುಡ್ (ಯುಕೆ), ಮಕೊಟೊ ಎಮೂರಾ (ಜಪಾನ್), ಚೆಯಿರಾ ಲಾ ಟೆಸ್ಸಾ (ಇಟಲಿ/ಜರ್ಮನಿ), ಮೈಕೆಲ್ ಲುಕಾಸ್ಸೆರ್ (ಆಸ್ಟ್ರೇಲಿಯ), ಪೀಟರ್  ಜೆ. ವಾಸ್ (ಯುಕೆ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.