ADVERTISEMENT

ಅಮೆರಿಕ: ನಗರದ ಎಂಜಿನಿಯರ್ ಸಾವು

​ಪ್ರಜಾವಾಣಿ ವಾರ್ತೆ
Published 26 ಜೂನ್ 2012, 19:45 IST
Last Updated 26 ಜೂನ್ 2012, 19:45 IST
ಅಮೆರಿಕ: ನಗರದ ಎಂಜಿನಿಯರ್ ಸಾವು
ಅಮೆರಿಕ: ನಗರದ ಎಂಜಿನಿಯರ್ ಸಾವು   

ಬೆಂಗಳೂರು: ನಗರದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಅಮೆರಿಕದ ನ್ಯೂಜೆರ್ಸಿಯ ವೆಲ್ಲಿಂಗ್‌ಟನ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸಂಜಯನಗರದಲ್ಲಿ ವಾಸವಿರುವ ಅಂಜಪ್ಪ ಹಾಗೂ ರಂಗರತ್ನಮ್ಮ ದಂಪತಿಯ ಮಗ ಪವನ್‌ಕುಮಾರ್ (26) ಮೃತಪಟ್ಟವರು. ನಗರದ ಕಾಗ್ನಿಜೆಂಟ್ ಟೆಕ್ನಾಲಜಿಸ್ ಸಾಫ್ಟ್‌ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಪವನ್‌ಕುಮಾರ್, ಕಂಪೆನಿ ಕೆಲಸ ನಿಮಿತ್ತ 2011ರ ಫೆಬ್ರುವರಿಯಲ್ಲಿ ಅಮೆರಿಕಕ್ಕೆ ಹೋಗಿದ್ದರು.

ಮೂಲತಃ ತುಮಕೂರು ಜಿಲ್ಲೆ ಪಾವಗಡದ ಅಂಜಪ್ಪ ಅವರಿಗೆ ಪವನ್ ಮತ್ತು ಗುಣಶೀಲಾ ಎಂಬ ಇಬ್ಬರ ಮಕ್ಕಳು. ಗುಣಶೀಲಾ ಶಾಲಾ ಶಿಕ್ಷಕಿಯಾಗಿದ್ದಾರೆ. ಪವನ್ ಬೆಂಗಳೂರಿನ ಸಪ್ತಗಿರಿ ಕಾಲೇಜಿನಲ್ಲಿ ಬಿ.ಇ ಓದಿದ್ದರು. `ಕಾಗ್ನಿಜೆಂಟ್ ಟೆಕ್ನಾಲಜಿಸ್ ಕಂಪೆನಿಯ ನಗರ ಶಾಖೆ ಯ ಪ್ರವೀಣ್‌ಜೋಷಿ ಎಂಬ ಅಧಿಕಾರಿ ಜೂ.20ರಂದು ಕರೆ ಮಾಡಿ ನಿಮ್ಮ ಮಗ ಪವನ್‌ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರು. ಈ ವಿಷಯ ಕೇಳಿ ಆಘಾತವಾಯಿತು~ ಎಂದು ಪೋಷಕರು ತಿಳಿಸಿದರು.

`ಮಗ ಸಾವನ್ನಪ್ಪಿದ್ದಾನೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆತನ ಸಾವಿನ ಬಗ್ಗೆ ಕಂಪೆನಿಯವರು ಹೆಚ್ಚಿನ ವಿವರ ನೀಡುತ್ತಿಲ್ಲ. ಅಲ್ಲದೇ, ಶವವನ್ನು ದೇಶಕ್ಕೆ ತರಲು ಕಂಪೆನಿಯವರು ಸಹಕರಿಸುತ್ತಿಲ್ಲ. ಅಮೆರಿಕದಲ್ಲಿರುವ ಮಗನ ಶವವನ್ನು ನಗರಕ್ಕೆ ತರಲು ಯಾರನ್ನು ಸಂಪರ್ಕಿಸಬೇಕೆಂದು ಗೊತ್ತಾಗುತ್ತಿಲ್ಲ~ ಎಂದು ಅಳಲು ತೋಡಿಕೊಂಡರು.

`ಜೂ.15ರಂದು ತಮ್ಮ ಕಡೆಯ ಬಾರಿಗೆ ಕರೆ ಮಾಡಿದ್ದ. ಪ್ರತಿಭಾವಂತನಾಗಿದ್ದ ಆತ ಯಾವಾಗಲೂ ತರಗತಿಯ್ಲ್ಲಲಿ ಮೊದಲಿಗನಾಗಿದ್ದ. ಪವನ್ ಜುಲೈ ಮೊದಲ ವಾರದಲ್ಲಿ ದೇಶಕ್ಕೆ ವಾಪಸ್ ಬರಬೇಕಿತ್ತು. ಆತನ ಸಾವಿನ ಬಗ್ಗೆ ವಿವರ ನೀಡುವಂತೆ ಮನವಿ ಮಾಡಿದರೂ ಕಂಪೆನಿಯವರು ಸ್ಪಂದಿಸುತ್ತಿಲ್ಲ.

ಪವನ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಅಮೆರಿಕದ ಕಡಲ ತೀರದ ಸಮೀಪ ಆ ಯುವತಿಯ ಶವ ಪತ್ತೆಯಾಗಿತ್ತು. ಇದರಿಂದ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಂಪೆನಿಯ ಆಡಳಿತ ಮಂಡಳಿ ಅಧಿಕಾರಿಗಳು ಹೇಳುತ್ತಿದ್ದಾರೆ~ ಎಂದು ಗುಣಶೀಲಾ ತಿಳಿಸಿದರು .

`ಶವವನ್ನು ಪತ್ತೆ ಮಾಡಿ ಕೊಡಿ. ಅಂತ್ಯಕ್ರಿಯೆಯನ್ನಾದರೂ ಮಾಡುತ್ತೇವೆ~ ಎಂದು ಪೋಷಕರು ಕಂಪೆನಿಗೆ ಹಾಗೂ ಭಾರತದ ರಾಯಭಾರಿ ಕಚೇರಿಗೆ ಮನವಿ ಮಾಡಿದ್ದಾರೆ.`ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ಪವನ್ ಕುಟುಂಬದವರಿಗೆ ಮಾಹಿತಿ ಕೊಟ್ಟಿದ್ದಾರೆ.

ಅವರ ಕುಟುಂಬದವರನ್ನು ಭೇಟಿ ಮಾಡಿ ಕಾನೂನು ನೆರವು ನೀಡುವುದಾಗಿ ಹಾಗೂ ಶವವನ್ನು ದೇಶಕ್ಕೆ ತರಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಅಮೆರಿಕದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ~ ಎಂದು ಕಾಂಗ್ನಿಜೆಂಟ್ ಕಂಪೆನಿಯ ಅಧಿಕಾರಿಗಳು ಹೇಳಿದ್ದಾರೆ.

ಆತ್ಮಹತ್ಯೆ ಶಂಕೆ: `ಡೇನಿಯಲ್ ಮೆಹಲ್ಮನ್ ಎಂಬ ಶಿಕ್ಷಕಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪದ ಮೇಲೆ ಪವನ್ ಬಂಧನಕ್ಕೆ ಅಮೆರಿಕ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿತ್ತು.
ಪವನ್ ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತು ಮತ್ತು ಮದ್ಯ ಸೇವನೆ ಮಾಡಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸರು ಶಂಕಿಸಿದ್ದಾರೆ. ಶವವನ್ನು ಬೆಲ್ಲೆವೆಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾ ಗಿದೆ~ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.