ADVERTISEMENT

‘ಅಯ್ಯೋ, ಬಾಯ್ತಪ್ಪಿ ಹಾಗೆ ಹೇಳಿಬಿಟ್ಟೆ’

ವರ್ಷಕ್ಕೊಮ್ಮೆ ನಡೆಯುತ್ತಾ ಚುನಾವಣೆ? ಕಿರುತೆರೆ ತಾರೆಗೆ ಪ್ರಶ್ನೆಗಳ ಸುರಿಮಳೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 29 ಏಪ್ರಿಲ್ 2018, 11:07 IST
Last Updated 29 ಏಪ್ರಿಲ್ 2018, 11:07 IST
‘ಅಯ್ಯೋ, ಬಾಯ್ತಪ್ಪಿ ಹಾಗೆ ಹೇಳಿಬಿಟ್ಟೆ’
‘ಅಯ್ಯೋ, ಬಾಯ್ತಪ್ಪಿ ಹಾಗೆ ಹೇಳಿಬಿಟ್ಟೆ’   

ಬೆಂಗಳೂರು: ‘ಹಾಯ್ ಹಲೊ ನಮಸ್ಕಾರ. ಪ್ರತಿ ವರ್ಷದ ಹಾಗೆ ಈ ವರ್ಷವೂ ಎಲೆಕ್ಷನ್ ಬರ್ತಾ ಇದೆ. ಪ್ರತಿ ವರ್ಷದ ಹಾಗೆ ಈ ವರ್ಷವೂ ಒಳ್ಳೇ ಲೀಡರ್‌ನ ಆಯ್ಕೆ ಮಾಡಬೇಕು. ಅದಕ್ಕೆ ನಮ್ಮ ವೋಟ್ ಯಾರಿಗೆ ಇರಬೇಕು ಹೇಳಿ...’

–ಇದು ರಾಜ್ಯದ ಬಹುಪಾಲು ಗೃಹಿಣಿಯರು ಇಷ್ಟಪಟ್ಟು ನೋಡುವ ‘ಅಗ್ನಿಸಾಕ್ಷಿ’ ಧಾರಾವಾಹಿಯ ಚಂದ್ರಿಕಾ ಪಾತ್ರಧಾರಿ ಪ್ರಿಯಾಂಕಾ ಅವರ ಮಾತು. 17 ಸೆಕೆಂಡ್‌ಗಳ ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆಗುತ್ತಿದೆ.

‘ಸರಿ ಮೇಡಂ, ಈ ವರ್ಷ ನಮಗೆ ಬೇಕಾದವರಿಗೆ ವೋಟ್ ಹಾಕ್ತೀವಿ. ಮುಂದಿನ ವರ್ಷ ನೀವು ಹೇಳಿದವರಿಗೆ ವೋಟ್ ಹಾಕ್ತೀವಿ’ ಎಂದು ಹಲವರು ನಟಿಯ ಮಾತನ್ನು ಲೇವಡಿ ಮಾಡಿದ್ದಾರೆ.

ADVERTISEMENT

ಈ ಕುರಿತು ಭಾನುವಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ, ‘ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತೆ ಅಂತ ನನಗೆ ಗೊತ್ತು. ಬಾಯಿತಪ್ಪಿ ವರ್ಷಕ್ಕೊಮ್ಮೆ ಚುನಾವಣೆ ಆಗುತ್ತೆ ಆಂತ ಹೇಳಿಬಿಟ್ಟೆ. ಮಂಡ್ಯ ಜಿಲ್ಲೆಯ ನನ್ನ ಅಭಿಮಾನಿ ಶ್ರೀನಿವಾಸ್‌ ಅವರ ಒತ್ತಾಯಕ್ಕೆ ಮಣಿದು ವಿಡಿಯೊ ರೆಕಾರ್ಡ್ ಮಾಡಿ ಕಳಿಸಿದೆ. ಅವರು ಯಾವ ಕ್ಷೇತ್ರದವರು ಎಂಬುದೂ ನನಗೆ ಗೊತ್ತಿಲ್ಲ. ಇನ್ನೂ ಈ ವಿಷಯದ ಬಗ್ಗೆ ಏನನ್ನೂ ಹೇಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನನಗೆ ಬೆಂಗಳೂರಿನಲ್ಲಿ ಮತ ಇದೆ. ಪ್ರತಿ ಚುನಾವಣೆಯಲ್ಲಿಯೂ ನಾನು ಮತ ಚಲಾಯಿಸುತ್ತೇನೆ. ಮತದಾನ ಮಾಡುವುದು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು’ ಎಂಬುದು ಪ್ರಿಯಾಂಕಾ ಹೇಳಿದ ಮಾತು.

‘ಧಾರಾವಾಹಿಗಳಲ್ಲಿ ನಟಿಸುವವರಿಗೆ ಸಾವಿರಾರು ಮಂದಿ ಅಭಿಮಾನಿಗಳಾಗಿರುತ್ತಾರೆ. ಯಾರೋ ಕೋರಿದರು ಎಂದು ಪೂರ್ವಾಪರ ವಿಚಾರಿಸದೆ ಅವರ ಪರವಾಗಿ ಪ್ರಚಾರಕ್ಕೆ ಅನುಕೂಲವಾಗುವಂತೆ ವಿಡಿಯೊ ಕ್ಲಿಪಿಂಗ್ ಮಾಡಿಕೊಟ್ಟಿದ್ದು ಎಷ್ಟರಮಟ್ಟಿಗೆ ಸರಿ’ ಎಂದು ಅನೇಕರು ಪ್ರಶ್ನಿಸಿದ್ದಾರೆ.

‘ಇವರು ಚುನಾವಣೆ ಅನ್ನೋದು ಪ್ರತಿ ವರ್ಷ ಬರೋ ಗಣೇಶ ಚತುರ್ಥಿ ಅನ್ಕೊಂಡಿರಬೇಕು. ಚುನಾವಣೆ ಐದು ವರ್ಷಕ್ಕೆ ಬರೋದು ಅಂತ ಗೊತ್ತೇ ಇಲ್ಲ ಪಾಪ’ ಎಂದು ಬಣಕೂರು ವಿರೂಪಾಕ್ಷಪ್ಪ ಎನ್ನುವವರು ಫೇಸ್‌ಬುಕ್‌ನಲ್ಲಿ ಲೇವಡಿ ಮಾಡಿದ್ದಾರೆ.

‘ಒಂದು ಸೀರಿಯಲ್, ಒಂದು ಜಾಹೀರಾತಿನ ಕೆಲಸ ಅಂದ್ರೆ ಸಾಕು. ಏನು ಹೇಳ್ತಿದೀನಿ, ಕೇಳ್ತಿದೀನಿ ಅನ್ನೋದು ಗೊತ್ತಿಲ್ಲ. ಈ ರೀತಿಯ ಕೆಲಸ ಜವಾಬ್ದಾರಿಯಿಂದ ನಿರ್ವಹಿಸಬೇಕು ಅಂತಾನೂ ಗೊತ್ತಿಲ್ಲ’ ಎಂದು ಪೂರ್ಣಿಮಾ ಗಿರೀಶ್ ಬೇಸರ ವ್ಯಕ್ತಪಡಿಸಿದ್ದಾರೆ.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.