ADVERTISEMENT

ಅರಣ್ಯದಲ್ಲಿ ಗುಂಡಿನ ದಾಳಿ: ತನಿಖೆ ಚುರುಕು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST

ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ತಾರಕ ಹಿನ್ನೀರಿನ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಆದಿವಾಸಿಗಳ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀಚನಹಳ್ಳಿ ಠಾಣೆ ಪೊಲೀಸರು ಶನಿವಾರ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಅರಣ್ಯ ಪ್ರವೇಶ ಮಾಡಿದ ಆದಿವಾಸಿಗಳ ಮೇಲೆ ಕರ್ತವ್ಯನಿರತ ಗಾರ್ಡ್ ಗೋವಿಂದ ಮತ್ತು ವಾಚರ್ ಚಿಕ್ಕಣ್ಣೇಗೌಡ ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಆದಿವಾಸಿ ಭೀಮಸೇನ, ಈತನ ಸಹೋದರ ರವಿ ಅಲಿಯಾಸ್ ಕುಂಟ ಗಾಯಗೊಂಡರೆ ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ.

ಭೀಮಸೇನ ಬಲಗಾಲಿಗೆ ಪೆಟ್ಟಾಗಿದ್ದು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೀನು ಹಿಡಿಯಲು  ಹೋದವರ ತಮ್ಮ ಮೇಲೆ ಅರಣ್ಯ ಸಿಬ್ಬಂದಿ ಗುಂಡಿನ ದಾಳಿ ನಡೆಸಿ ಗಾಯಗೊಳಿಸಿತು ಎಂದು ರವಿ ಬೀಚನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಭೀಮಸೇನ ಮತ್ತು ಇತರರ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆಯಡಿ ಅಕ್ರಮ ಅರಣ್ಯ ಪ್ರವೇಶ, ಅಕ್ರಮ ಮೀನುಗಾರಿಕೆ, ಅರಣ್ಯ  ಸಿಬ್ಬಂದಿ ಮೇಲೆ ದಾಳಿ ಯತ್ನ ಹಾಗೂ ಬೆಲೆ ಬಾಳುವ ಮರ-ಮುಟ್ಟುಗಳ ಸಾಗಣೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಬೀಚನಹಳ್ಳಿ ಠಾಣೆಯಲ್ಲಿ  ಅರಣ್ಯ ಇಲಾಖೆ ಪ್ರತಿದೂರು ನೀಡಿದೆ.

`ಆದಿವಾಸಿಗಳು ಅರಣ್ಯ ಅಕ್ರಮ ಪ್ರವೇಶ ಮಾಡಿ ಮೀನುಗಳನ್ನು ಹಿಡಿದು, ಬೆಲೆ ಬಾಳುವ ಮರಗಳನ್ನು ಸಾಗಿಸುವ ವೇಳೆ ಗೋವಿಂದ ಮತ್ತು ಚಿಕ್ಕಣ್ಣೇಗೌಡ  ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಸಿಬ್ಬಂದಿಯ ತಪ್ಪೇನಿಲ್ಲ.

ಅರಣ್ಯ ಅತಿಕ್ರಮ ಪ್ರವೇಶ ಮಾಡಿದ ಸಂದರ್ಭದಲ್ಲಿ ಕೆಳಹಂತದ ಸಿಬ್ಬಂದಿ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಗುಂಡಿನ ದಾಳಿ ನಡೆಸುತ್ತಾರೆ~ ಎಂದು ಮೇಟಿಕುಪ್ಪೆ ಉಪ ವಿಭಾಗದ ಎಸಿಎಫ್ ಚಂದ್ರಶೇಖರ್ `ಪ್ರಜಾವಾಣಿ~ಗೆ ತಿಳಿಸಿದರು.

ಗಾರ್ಡ್ ಗೋವಿಂದನಿಗೆ ಪ್ರಶಸ್ತಿ:  ಆರೋಪ ಹೊತ್ತಿರುವ ಗಾರ್ಡ್ ಗೋವಿಂದ ಗುಂಡಿನ ದಾಳಿ ನಡೆಸುವುದರಲ್ಲಿ ನಿಸ್ಸೀಮ. ನಾಲ್ಕು ವರ್ಷಗಳ ಹಿಂದೆ ಎಚ್.ಡಿ.ಕೋಟೆ ಅರಣ್ಯ ಪ್ರದೇಶಕ್ಕೆ ಕೇರಳ ಮೂಲದ ದುಷ್ಕರ್ಮಿಗಳು ಅಕ್ರಮ ಪ್ರವೇಶ ಮಾಡಿ ಸಂಪತ್ತು ಲೂಟಿ ಮಾಡಲು ಯತ್ನಿಸಿದಾಗ ಈತನ ಗುಂಡಿನ ದಾಳಿಯಿಂದ ಸೆರೆ ಸಿಕ್ಕಿದ್ದರು. ಈ ಕಾರ್ಯಕ್ಕಾಗಿ ಗೋವಿಂದನಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.