ADVERTISEMENT

ಅರಣ್ಯವಾಸಿಗಳಿಗೆ ಅಡುಗೆ ಅನಿಲ ವಿತರಣೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 19:30 IST
Last Updated 19 ಮಾರ್ಚ್ 2011, 19:30 IST
ಅರಣ್ಯವಾಸಿಗಳಿಗೆ ಅಡುಗೆ ಅನಿಲ ವಿತರಣೆ
ಅರಣ್ಯವಾಸಿಗಳಿಗೆ ಅಡುಗೆ ಅನಿಲ ವಿತರಣೆ   

ಕಾರವಾರ: ಅರಣ್ಯದ ಮೇಲೆ ಜನರ ಅವಲಂಬನೆಯಲ್ಲಿ ಬದಲಾವಣೆ ತರಲು ಹೊರಟಿರುವ ಅರಣ್ಯ ಇಲಾಖೆಯು ಅರಣ್ಯ ವಾಸಿಗಳಿಗೆ ಅಡುಗೆ ಅನಿಲ ಸಿಲಿಂಡರ್ ಹಾಗೂ ಒಲೆ ವಿತರಿಸುವ ಮೂಲಕ ಮಾದರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.ತಾಲ್ಲೂಕಿನ ನಿವಳಿ ಅರಣ್ಯದಲ್ಲಿರುವ ನಿವಾಸಿಗಳಿಗೆ 15 ಗ್ಯಾಸ್ ಸಿಲಿಂಡರ್ ಹಾಗೂ ಒಲೆಗಳನ್ನು ಡಿಎಫ್‌ಓ ಆರ್.ಗೋಕುಲ ಶನಿವಾರ ವಿತರಣೆ ಮಾಡಿದರು. ಪ್ರತಿ ಸಿಲಿಂಡರ್‌ನ ಮೇಲೆ ಶೇ.75 ರಷ್ಟು ಖರ್ಚನ್ನು ಅರಣ್ಯ ಇಲಾಖೆ ಭರಿಸಲಿದೆ.  

ಪಶ್ಚಿಮ ಘಟ್ಟಗಳ ಸೂಕ್ಷ್ಮ ಜೀವ ವೈವಿಧ್ಯದ ಕಾರವಾರದ ಸುತ್ತಲಿನ ಅರಣ್ಯಗಳ ಮೇಲೆ ಕಳೆದ ಎರಡು ದಶಕಗಳಿಂದ ಮಿತಿ ಮೀರಿದ ಒತ್ತಡ ಬೀಳುತ್ತಿದೆ. ದೈನಂದಿನ ಬದುಕಿಗೆ ಅರಣ್ಯವನ್ನೇ ಅವಲಂಬಿಸಿರುವ ಜನರು ಬೇರೆ ದಾರಿಯಿಲ್ಲದೆ ಒಲೆಗಳಿಗೆ ಅರಣ್ಯದಲ್ಲಿ ಸಿಗುವ ಮರಗಳನ್ನೇ ಬಳಸುತ್ತಿದ್ದಾರೆ.

ಅರಣ್ಯ ನಾಶಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಅಡುಗೆ ಅನಿಲ ರಹಿತ ಗ್ರಾಮಗಳನ್ನು ಅಡುಗೆ ಅನಿಲ ಸಹಿತ ಗ್ರಾಮಗಳನ್ನಾಗಿ ಪರಿವರ್ತಿಸಲು ಯೋಜನೆಗಳನ್ನು ಹಮ್ಮಿಕೊಳ್ಳಬಹುದಾಗಿದೆ.

ಕಾರವಾರ ಅರಣ್ಯ ವಲಯದಲ್ಲಿ 21 ಗ್ರಾಮಗಳಿದ್ದು 8 ಸಾವಿರ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ಪ್ರತಿದಿನ ಕನಿಷ್ಠ ಅರ್ಧ ಹೊರೆ ಸೌದೆ ಬೇಕಾಗುತ್ತದೆ. ಈ ಎಂಟು ಸಾವಿರ ಕುಟುಂಬಗಳಿಗೆ ಪ್ರತಿದಿನ ಒಂದು ಸಾವಿರ ಸೌದೆ ಹೊರೆ ಅವಶ್ಯಕತೆ ಇದೆ ಎಂದು ಗಣನೆಗೆ ತೆಗೆದುಕೊಂಡರೆ ಪ್ರತಿದಿನ ಕನಿಷ್ಠ 30 ಟನ್ ಅರಣ್ಯ ಸೌದೆ ಬಳಕೆಯಾಗುತ್ತದೆ. ತಾಲ್ಲೂಕಿನ ಮೂರು ಅರಣ್ಯ ವಲಯ ಸೇರಿ ಕನಿಷ್ಠ 70 ಟನ್ ಅರಣ್ಯ ಸೌದೆ ಬಳಕೆಯಾಗುತ್ತದೆ.

ಇಡೀ ಕಾರವಾರ ವಲಯದ 21 ಗ್ರಾಮಗಳಿಗೆ ಹೋಲಿಸಿದರೆ 15 ಲಕ್ಷ ಗಿಡಗಳನ್ನು ಸಾರ್ವಜನಿಕರು ಉರುವಲು ಹಾಗೂ ಮತ್ತಿತರ ಉದ್ದೇಶಗಳಿಗೆ ಬಳಸುತ್ತಿದ್ದಾರೆ. ಮರಗಳ ನಾಶ ತಪ್ಪಿಸಲು ಅರಣ್ಯ ಇಲಾಖೆ ಇಟ್ಟಿರುವ ಹೆಜ್ಜೆಯನ್ನು ಅರಣ್ಯವಾಸಿಗಳು ಸ್ವಾಗತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.