ADVERTISEMENT

ಅರಣ್ಯಾಧಿಕಾರಿ ಮನೆ ಕೆಲಸಕ್ಕಿದ್ದ ದಲಿತ ಬಾಲಕಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಮಂಗಳೂರು: ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಮನೆಯಲ್ಲಿ ಕೆಲಸಕ್ಕಿದ್ದ ದಲಿತ ಬಾಲಕಿಯನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಮಂಗಳವಾರ ರಕ್ಷಿಸಿದರು.

ನಗರದ ಎಂ.ಜಿ. ರಸ್ತೆಯಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಾಲಯ್ಯ ಅವರ ಮನೆಯಲ್ಲಿ ಹುಬ್ಬಳ್ಳಿಯ ರೇಣುಕಾ ಕೆಲಸಕ್ಕಿದ್ದಳು. ಈ ಬಗ್ಗೆ ಮಾಹಿತಿ ಲಭ್ಯವಾದ ನಂತರ ಕಾರ್ಮಿಕ ಇಲಾಖೆಯ ಹಿರಿಯ ತನಿಖಾ ಅಧಿಕಾರಿಗಳಾದ ಯು.ಎಸ್.ದೇಶಪಾಂಡೆ, ಎಚ್.ಪಿ.ಜ್ಞಾನೇಶ್ ಹಾಗೂ ಕೃಷ್ಣಮ್ಮ ಅವರ ತಂಡ ಪಾಲಯ್ಯ ಅವರ ಮನೆಗೆ ಬೆಳಿಗ್ಗೆ 10.30ರ ವೇಳೆ ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಿದರು.

ಶಾಲೆ ಬಿಡಿಸಿದರು: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕಿ ರೇಣುಕಾ, `ಒಂದು ತಿಂಗಳಿಂದ ಇಲ್ಲಿ ಕೆಲಸಕ್ಕಿದ್ದೇನೆ. ಮನೆ ಶುಚಿಗೊಳಿಸುವ ಕೆಲಸ ಮಾಡುತ್ತಿದ್ದೆ. ತಿಂಗಳಿಗೆ ರೂ. 600 ನೀಡುವುದಾಗಿ ನನ್ನ ಅಪ್ಪ-ಅಮ್ಮನಿಗೆ ಹೇಳಿ ನನ್ನನ್ನು ಕರೆತಂದಿದ್ದಾರೆ. 2 ತಿಂಗಳ ಹಿಂದೆ ಶಾಲೆ ಬಿಟ್ಟೆ, 3ನೇ ತರಗತಿ ಓದುತ್ತಿದ್ದೆ~ ಎಂದು ಅಳಲು ತೋಡಿಕೊಂಡಳು.

`ನನಗೆ ಓದಲು ಆಸೆಯಿದೆ. ಆದರೆ ನನ್ನನ್ನು ಬಲವಂತವಾಗಿ ಶಾಲೆ ಬಿಡಿಸಿ ಮನೆಗೆಲಸಕ್ಕೆ ಸೇರಿಸಿದ್ದಾರೆ~ ಎಂದು  ರೇಣುಕಾ (ಅಂದಾಜು 10 ವರ್ಷ) ಕಣ್ಣೀರಿಟ್ಟಳು.

ಕಾರ್ಮಿಕ ಇಲಾಖೆ ಹಿರಿಯ ತನಿಖಾ ಅಧಿಕಾರಿ ಯು.ಪಿ.ಜ್ಞಾನೇಶ್ ಮಾತನಾಡಿ, `ಬಾಲಕಿಯ ತಂದೆ ಬಸವರಾಜು, ತಾಯಿ ರತ್ನಮ್ಮ ಹುಬ್ಬಳ್ಳಿಯವರಾಗಿದ್ದು, ಸದ್ಯ ನಗರದ ಪಡೀಲಿನ ಬಳಿ ಕೂಲಿ ಕೆಲಸ ಮಾಡುತ್ತಿದ್ದಾರೆ. ರೇಣುಕಾ  ವಯಸ್ಸು ಇನ್ನೂ ನಿಖರವಾಗಿ ತಿಳಿದಿಲ್ಲ. ನಗರ ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ವಯಸ್ಸು ಎಷ್ಟು ಎಂಬುದು ನಿಖರವಾಗಿ ತಿಳಿದು ಬರಲಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.