ADVERTISEMENT

ಅರಣ್ಯ ಪ್ರದೇಶ ಹೆಚ್ಚಾಗಿಲ್ಲ ಏಕೆ

ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2017, 19:30 IST
Last Updated 5 ಜೂನ್ 2017, 19:30 IST
‘ರಾಜ್ಯ ಪರಿಸರ ಪ್ರಶಸ್ತಿ’ಯನ್ನು ಸಂಸ್ಥೆಗಳ ವಿಭಾಗದಲ್ಲಿ ‘ನಾಗರಹೊಳೆ ಹುಲಿ ಸಂರಕ್ಷಿತ ಫೌಂಡೇಷನ್’ನ ಎಸ್‌. ಮಣಿಕಂಠನ್, ದೇವನಹಳ್ಳಿ ತಾಲ್ಲೂಕಿನ ‘ಅಣ್ಣೇಶ್ವರ ಗ್ರಾಮ ಪಂಚಾಯ್ತಿ’ ಅಧ್ಯಕ್ಷೆ ಲಕ್ಷ್ಮೀ ಮುರುಳಿ, ವೈಯಕ್ತಿಕ ವಿಭಾಗದಲ್ಲಿ ರಾಯಚೂರಿನ ಪ್ರೊ. ಸಿ.ಡಿ. ಪಾಟೀಲ, ಉತ್ತರ ಕನ್ನಡ ಜಿಲ್ಲೆಯ ಎಂ.ಬಿ. ನಾಯ್ಕ ಕಡಕೇರಿ, ಬೆಂಗಳೂರಿನ ಬಿ.ಎಂ.ಎಸ್‌. ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಿ.ಟಿ. ಪುಟ್ಟಸ್ವಾಮಿ, ‘ಕಲಬುರ್ಗಿ ಮಹಾನಗರ ಪಾಲಿಕೆ’ (ಸಂಸ್ಥೆಗಳ ವಿಭಾಗ) ಮೇಯರ್ ಶರಣು ಮೋದಿ, ಆಯುಕ್ತ ಟಿ. ಸುನೀಲ್‌ಕುಮಾರ್‌ ಅವರಿಗೆ ಪ್ರದಾನ ಮಾಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಸಚಿವ ರಮಾನಾಥ ರೈ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ ಇದ್ದರು.  –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ದಾಖಲೆಗಳ ಪ್ರಕಾರ ಪ್ರತಿವರ್ಷ 6ರಿಂದ 8 ಕೋಟಿ ಸಸಿಗಳನ್ನು ನೆಡುತ್ತಿದ್ದರೂ ಶೇಕಡಾವಾರು ಅರಣ್ಯ ಪ್ರದೇಶ ಹೆಚ್ಚಳ ಆಗಿಲ್ಲ ಏಕೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸೋಮವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿ ಸಮತೋಲನದಲ್ಲಿ ಇರಬೇಕೆಂದರೆ ಒಟ್ಟು ಭೂ ಪ್ರದೇಶದಲ್ಲಿ ಮೂರನೇ ಒಂದು ಭಾಗವಾದರೂ ಅರಣ್ಯ ಇರಬೇಕು. ಆದರೆ, ರಾಜ್ಯದಲ್ಲಿ ಶೇ 19ರಷ್ಟು ಮಾತ್ರ ಅರಣ್ಯ  ಇದೆ ಎಂದರು.

ADVERTISEMENT

‘ನಾನು 25 ವರ್ಷದಿಂದಲೂ ಇದೇ ಅಂಕಿ– ಅಂಶ ಕೇಳುತ್ತಿದ್ದೇನೆ.  ಪ್ರತಿವರ್ಷ ಕೋಟಿಗಟ್ಟಲೆ ಸಸಿ ನೆಟ್ಟರೂ ಶೇಕಡಾವಾರು ಪ್ರಮಾಣ ಸ್ವಲ್ಪವೂ  ಏರಿಕೆಯಾಗಿಲ್ಲ ಎಂದರೆ ಏನರ್ಥ. ಕಳೆದ ವರ್ಷ 8 ಕೋಟಿ ಸಸಿ ನೆಟ್ಟಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನೆಟ್ಟರೋ, ಬಿಟ್ಟರೋ, ಲೆಕ್ಕ ಮಾತ್ರ ಇದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅರಣ್ಯ ನಾಶದಿಂದ ಮಲೆನಾಡಿನಲ್ಲೇ ಮಳೆ ಇಲ್ಲವಾಗಿದೆ. ಉದ್ಯಾನನಗರಿ ಎಂಬ ಖ್ಯಾತಿ ಈಗ ಬೆಂಗಳೂರಿಗೆ ಇಲ್ಲ. ಕೆರೆಗಳು ನೊರೆ ತುಂಬಿಕೊಂಡು ಕಲುಷಿತಗೊಂಡಿವೆ. ಅರಣ್ಯ ರಕ್ಷಣೆ ಮರೆತರೆ ಮುಂದೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದರು.

ಸಾಲುಮರದ ತಿಮ್ಮಕ್ಕ ‘ವೃಕ್ಷ ಉದ್ಯಾನವನ’
ಸಾಲುಮರದ ತಿಮ್ಮಕ್ಕನ ಹೆಸರಿನಲ್ಲಿ ‘ವೃಕ್ಷ ಉದ್ಯಾನವನ’ಗಳನ್ನು ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ  ಅಭಿವೃದ್ಧಿಪಡಿಸಲಾಗುವುದು. ಮೊದಲ ಹಂತದಲ್ಲಿ 50 ಉದ್ಯಾನಗಳ ಅಭಿವೃದ್ಧಿಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಅರಣ್ಯ ಸಚಿವ ರಮಾನಾಥ ರೈ ತಿಳಿಸಿದರು.

ಈ ವರ್ಷ ರಾಜ್ಯದಾದ್ಯಂತ 6 ಕೋಟಿ ಸಸಿಗಳನ್ನು ನೆಡುವ ಗುರಿ ಇದೆ. ರೈತರು ತಮ್ಮ ಜಮೀನಿನಲ್ಲಿ ಗಿಡಗಳನ್ನು ಬೆಳೆಸಿದರೆ ‘ಅರಣ್ಯ ಕೃಷಿ ಪ್ರೋತ್ಸಾಹ ಯೋಜನೆ’ ಅಡಿ ಸಹಾಯಧನ  ನೀಡಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.