ADVERTISEMENT

ಅರಮನೆ ಅಂಗಳದಲ್ಲಿ ಗಜಗಳ `ಮಿಲನ ಮಹೋತ್ಸವ'

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2013, 19:59 IST
Last Updated 8 ಸೆಪ್ಟೆಂಬರ್ 2013, 19:59 IST

ಮೈಸೂರು: ದಸರಾ ಮಹೋತ್ಸವಕ್ಕೆ ಬಂದ ಸರಳಾ ಎಂಬ ಹೆಣ್ಣಾನೆಗೆ ಭಾನುವಾರ ನಗರದ ಅಂಬಾವಿಲಾಸ ಅರಮನೆಯಲ್ಲಿ ಮಿಲನ ಮಹೋತ್ಸವದ ಭಾಗ್ಯ! ಒಂದು ಆನೆಯೊಂದಿಗಲ್ಲ, ನಾಲ್ಕು ಆನೆಗಳೊಂದಿಗೆ! ಬೆಳಿಗ್ಗೆ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮಿಗೆ ಹೋಗಿ ಬಂದ ನಂತರ ಅರ್ಜುನನ ಬಳಿ ತೆರಳಿದ ಸರಳಾ ಸರಸದಲ್ಲಿ ತೊಡಗಿತು. ಇದಾದ ಮೇಲೆ ಮಧ್ಯಾಹ್ನ ಮೂರೂವರೆಯ ಹೊತ್ತಿಗೆ ಸರಳಾ ಬಳಿ ಬಲರಾಮ ಸುಳಿದಾಡತೊಡಗಿದ.

ತನ್ನ ಸೊಂಡಿಲಿನಿಂದ ಸರಳಾ ಮೈಯನ್ನು ಸವರಿದ. ಇದಕ್ಕೆ ಸ್ಪಂದಿಸಿದ ಸರಳಾ ತನ್ನ ಸೊಂಡಿಲಿನಿಂದ ಬಲರಾಮನ ಮೈಯನ್ನು ಮುದ್ದಾಡಿತು. ಇದರಿಂದ ಉದ್ರೇಕಗೊಂಡ ಬಲರಾಮ ಕೂಡಲೇ  ಸರಳಾಳ ಬೆನ್ನ ಹಿಂದೆ ಬಂದು ನಿಧಾನವಾಗಿ ಮೇಲೇರಿದ. ಇದಕ್ಕೆ ಸರಳಾ ಸಹಕರಿಸಿತು. ಹೀಗೆ ಕೆಲವೇ ಕ್ಷಣಗಳಲ್ಲಿ ನಡೆದ ಮಿಲನ ಮಹೋತ್ಸವದ ನಂತರ ಬಲರಾಮನ ಮೈಯನ್ನು ಸರಳಾ ತನ್ನ ಸೊಂಡಿಲಿನಿಂದ ನೇವರಿಸುವ ಮೂಲಕ ಕೃತಜ್ಞತೆ ಸಲ್ಲಿಸಿತು.

ಇದಾದ ಮೇಲೆ ಅಭಿಮನ್ಯು ಬಳಿ ಸರಳಾ ಸುಳಿದಾಡತೊಡಗಿತು. ಹೀಗೆ ಸುಳಿದಾಡಿದ ಕೂಡಲೇ ಅಭಿಮನ್ಯು ರೋಮಾಂಚನಗೊಂಡ. ಪರಸ್ಪರ ಸೊಂಡಿಲಿನಿಂದ ಮೈದಡವಿಕೊಂಡವು. ಪರಸ್ಪರ ಮೈಯನ್ನು ಸ್ಪರ್ಶಿಸುವ ಮೂಲಕ ಮಿಲನಕ್ಕೆ ಅಣಿಗೊಂಡವು. ಕೂಡಲೇ ಸರಳಾ ಮೇಲೇರಿದ ಅಭಿಮನ್ಯು. ಕೆಲ ಕ್ಷಣಗಳವರೆಗೆ ನಡೆದ ಮಿಲನದ ನಂತರ ಪರಸ್ಪರ ಮೈ ತಾಗಿಸುವ ಮೂಲಕ, ಸೊಂಡಿಲಿನ ಮೂಲಕ ಕೃತಜ್ಞತೆ ಸಲ್ಲಿಸಿದವು. ಇದಾದ ಕೆಲ ನಿಮಿಷಗಳಲ್ಲಿಯೇ ಸರಳಾ ನೇರವಾಗಿ ನಡೆದುದು ಅನತಿ ದೂರದಲ್ಲಿರುವ ಅರ್ಜುನನ ಬಳಿ. ಮತ್ತೊಮ್ಮೆ ಕೂಡೋಣ ಬಾ ಎಂಬ ಆಹ್ವಾನಕ್ಕೆ ಅರ್ಜುನ ಸಜ್ಜಾಗುತ್ತಿದ್ದ.

ಆದರೆ ಸರಳಾ ಸುಸ್ತಾಗಿದ್ದಾಳೆ ಎಂದ ಅರಿತ ಅದರ ಮಾವುತ ರಾಮು ಅಂಕುಶವನ್ನು ಹಿಡಿದುಕೊಂಡೇ ಅದನ್ನು ನಿಯಂತ್ರಣಕ್ಕೆ ತಂದ. ನಂತರ ಅಲ್ಲಿಂದ ನೇರವಾಗಿ ಸ್ನಾನ ಮಾಡಿಸುವ ಸ್ಥಳಕ್ಕೆ ಕರೆದೊಯ್ದ. ಅದರ ಮೈಯನ್ನು ಕಾವಾಡಿಗರ ಸಹಾಯದಿಂದ ತಿಕ್ಕಿ ಸ್ವಚ್ಛವಾಗಿ ಸ್ನಾನ ಮಾಡಿಸಿದರು ರಾಮು. ಆಮೇಲೆ ಅದನ್ನು ಇತರ ಆನೆಗಳ ಹತ್ತಿರ ಕರೆತಂದು 12 ಕಿಲೊ ಭತ್ತ, ಉಪ್ಪು, 300 ಗ್ರಾಂ ಹಿಂಡಿ, ಅರ್ಧ ಕಿಲೋ ಬೆಲ್ಲವನ್ನು ಒಣಹುಲ್ಲಿನಲ್ಲಿ ಕಟ್ಟಿ ತಿನಿಸಿದರು.

ಹೀಗೆ ಮೆಲ್ಲಗೆ ಮೆದ್ದ ನಂತರ ಸಣ್ಣ ನಿದ್ದೆ ಮಾಡಿ ಎದ್ದ ಸರಳಾ, ಸಂಜೆ 5 ಗಂಟೆಯ ಹೊತ್ತಿಗೆ ಗಜೇಂದ್ರನೊಂದಿಗೆ ಸರಸವಾಡಿತು. ಇದಾದ ಮೇಲೆ ಸಂಜೆ 6 ಗಂಟೆಗೆ ಹೊರಟ ತಾಲೀಮಿನಲ್ಲಿ ಪಾಲ್ಗೊಂಡಳು. ಬನ್ನಿಮಂಟಪದವರೆಗೆ ಹೆಜ್ಜೆ ಹಾಕಿ ತಿರುಗಿ ಬಂದ ಸರಳಾ ಮತ್ತೆ ಗುಟುರು ಹಾಕಲಿಲ್ಲ.

`ಹೀಗೆ ಮಿಲನವಾದರೂ ಸರಳಾ ಗರ್ಭ ಧರಿಸುವುದು ಗ್ಯಾರಂಟಿ ಇಲ್ಲ. ಅರಮನೆಯೊಳಗೆ ಸುಸೂತ್ರವಾಗಿ ಮಿಲನ ನಡೆದಿದೆ. ಆದರೆ ಕಾಡಿನಲ್ಲಿ ಬೆದೆಗೆ ಬಂದ ಗಂಡಾನೆಗೆ ಹೆಣ್ಣಾನೆ ಸಹಕರಿಸದೆ ಇದ್ದಾಗ ಸೊಂಡಿಲಿನಿಂದ ಹೊಡೆಯುತ್ತವೆ. ಹೀಗಾಗಿ ಹೆಣ್ಣಾನೆಗಳು ಹೆದರಿ ಓಡಿಹೋಗುತ್ತವೆ' ಎನ್ನುತ್ತಾರೆ ಅರಮನೆಯಲ್ಲಿಯ ಗಜಪಡೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪಶು ವೈದ್ಯಾಧಿಕಾರಿ ಡಾ.ನಾಗರಾಜ್.

ಅರಮನೆಯಲ್ಲಿ ಹೀಗೆ ಮಿಲನ ಮಹೋತ್ಸವ ನಡೆಯಲು ಆನೆಗಳಿಗೆ ನೀಡುತ್ತಿರುವ ಪೌಷ್ಟಿಕ ಆಹಾರವೂ ಕಾರಣ ಎನ್ನುತ್ತಾರೆ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಸೇನಾನಿ. `ಕಾಡಿನಲ್ಲಿ ಅವುಗಳಿಗೆ ಸಿಗುವ ಆಹಾರ ವ್ಯತ್ಯಾಸವಾಗಬಹುದು. ಆದರೆ ಅರಮನೆಯಲ್ಲಿ ನಿಯಮಿತವಾಗಿ ಪೌಷ್ಟಿಕ ಆಹಾರ ಕೊಡಲಾಗುತ್ತಿದೆ. ಮಳೆಯಾಗಿದೆ ಜತೆಗೆ ಸಣ್ಣ ಚಳಿಯಿದೆ. ಹೀಗೆ ಆಹಾರ ಮತ್ತು ಪರಿಸರ ಪೂರಕವಾಗಿರುವುದರಿಂದ ಸಹಜವಾಗಿ ಸರಳಾ ಬೆದೆಗೆ ಬಂದಿದ್ದಾಳೆ.

ಇದನ್ನು ವಾಸನೆ ಮೂಲಕ ಕಂಡು ಹಿಡಿಯುತ್ತವೆ ಗಂಡಾನೆಗಳು. ಅರಮನೆಯಲ್ಲಿ ಸರಳವಾಗಿ ನಡೆದ ಹಾಗೆ ಕಾಡಿನಲ್ಲಿ ಅಷ್ಟು ಸರಳವಾಗಿ ಮಿಲನ ನಡೆಯುವುದಿಲ್ಲ' ಎಂದರು. `ಕಾಡಿನಲ್ಲಿ ಹೆಣ್ಣಾನೆ ಹಿಂಡಿನಲ್ಲಿ ಯಾವುದು ಬೆದೆಗೆ ಬಂದಿದೆ ಎಂಬುದನ್ನು ಮೊದಲು ಅರಿಯುತ್ತದೆ ಗಂಡಾನೆ. ನಂತರ ಆನೆಗಳೊಂದಿಗೆ ಇದ್ದು ಬಿಡುತ್ತದೆ. ಹೀಗೆ 15 ದಿನಗಳವರೆಗೂ ಇದ್ದು ಮಿಲನ ನಡೆದ ನಂತರ ತನ್ನ ಪಾಡಿಗೆ ತಾನು ಹೊರಡುತ್ತದೆ ಗಂಡಾನೆ. ಆಮೇಲೆ ಹೆಣ್ಣಾನೆ ಗರ್ಭ ಧರಿಸಿ, ಮರಿ ಹಾಕುವ ಪ್ರಕ್ರಿಯೆ 20 ತಿಂಗಳವರೆಗೆ ನಡೆಯುತ್ತದೆ' ಎಂದು ವಿವರ ನೀಡುತ್ತಾರೆ ಕೃಪಾಕರ ಸೇನಾನಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.