ADVERTISEMENT

ಅರಿಯಬೇಕಿದೆ ಇಬ್ಭಾಗದ ಹುನ್ನಾರ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2015, 19:46 IST
Last Updated 5 ಡಿಸೆಂಬರ್ 2015, 19:46 IST
ಬರಹಗಾರರೆಲ್ಲರೂ ಒಂದೇ ಜಾತಿಗೆ ಸೇರಿದವರು. ಆದರೆ, ಇತ್ತೀಚೆಗೆ  ಅವರಲ್ಲಿಯೂ ಎಡ–ಬಲ ಎಂಬ ಇಬ್ಭಾಗ, ಧ್ರುವೀಕರಣ ಹೆಚ್ಚುತ್ತಿರುವುದು ತುಂಬಾ ನೋವುಂಟು ಮಾಡುತ್ತಿದೆ. ಶಶಿ ದೇಶಪಾಂಡೆ
ಬರಹಗಾರರೆಲ್ಲರೂ ಒಂದೇ ಜಾತಿಗೆ ಸೇರಿದವರು. ಆದರೆ, ಇತ್ತೀಚೆಗೆ ಅವರಲ್ಲಿಯೂ ಎಡ–ಬಲ ಎಂಬ ಇಬ್ಭಾಗ, ಧ್ರುವೀಕರಣ ಹೆಚ್ಚುತ್ತಿರುವುದು ತುಂಬಾ ನೋವುಂಟು ಮಾಡುತ್ತಿದೆ. ಶಶಿ ದೇಶಪಾಂಡೆ   

ಬೆಂಗಳೂರು: ‘ಬರಹಗಾರರನ್ನು ಭಾಷೆ, ಜಾತಿ, ಸಿದ್ಧಾಂತದ ಹೆಸರಿನಲ್ಲಿ ಇಬ್ಭಾಗಿಸುವ ಹುನ್ನಾರಗಳು ಹಿಂದೆಂದಿಗಿಂತ ಇಂದು ತೀವ್ರಗತಿಯಲ್ಲಿ ನಡೆಯುತ್ತಿವೆ. ಈ ಒಡೆದು ಆಳುವ ನೀತಿಯನ್ನು ಎಲ್ಲಾ ಬರಹಗಾರರು ಅರ್ಥೈಸಿಕೊಳ್ಳುವ ತುರ್ತು ಅಗತ್ಯವಿದೆ’ ಎಂದು ಲೇಖಕಿ ಶಶಿ ದೇಶಪಾಂಡೆ ಒತ್ತಿ ಹೇಳಿದರು.

ನಗರದ ಹಳೇ ವಿಮಾನ ನಿಲ್ದಾಣ ರಸ್ತೆಯ ರಾಯಲ್‌ ಆರ್ಕಿಡ್‌ ಹೋಟೆಲ್‌ನಲ್ಲಿ ಶನಿವಾರ ಆರಂಭಗೊಂಡ ‘ಬೆಂಗಳೂರು ಸಾಹಿತ್ಯ ಉತ್ಸವ’ದ ನಾಲ್ಕನೇಯ ಆವೃತ್ತಿಯಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

‘ಅಸಹಿಷ್ಣುತೆ ಖಂಡಿಸಿ ಬರಹಗಾರರು ತಮಗೆ ಸಂದ ಪ್ರಶಸ್ತಿಗಳನ್ನು ವಾಪಸ್‌ ಮಾಡುವ ವಿಚಾರದಲ್ಲಿ ದೇಶದ ಸಾರಸ್ವತ ಲೋಕದೊಳಗೆ ಎರಡು ಪಂಗಡಗಳು ಸೃಷ್ಟಿಯಾದವು. ಆ ಕಾರಣ ಜನಸಾಮಾನ್ಯರಲ್ಲಿ ತಪ್ಪು ಅಭಿಪ್ರಾಯಗಳು ಮೂಡಲು ಆರಂಭಿಸಿದವು. ಅಸಹಿಷ್ಣುತೆ ವಿಚಾರವಾಗಿ ನಡೆಯುತ್ತಿರುವ ಸಂವಾದ, ಚರ್ಚೆಗಳು ಅಸಂಬದ್ಧವಾದ ರೀತಿಯಲ್ಲಿ ಹಳಿ ತಪ್ಪಿ ಸಾಗುತ್ತಿವೆ. ಕೆಲ ಬುದ್ಧಿವಂತರ ಕುತಂತ್ರದಿಂದ ಈ ಗೊಂದಲ ಉಂಟಾಯಿತೆ? ನನಗೆ ಗೊತ್ತಿಲ್ಲ’ ಎಂದರು.

‘ತುಂಬ ಶಾಂತಿ ಮತ್ತು ಸಜ್ಜನರಿರುವ ಧಾರವಾಡದಂತಹ ಪ್ರದೇಶದಲ್ಲಿ ನಡೆದ ಕಲಬುರ್ಗಿ ಅವರ ಹತ್ಯೆ ತುಂಬಾ ಘಾತಕಾರಿಯಾದದ್ದು. ಆದರೆ, ಈ  ಬಗ್ಗೆ ಸಾಹಿತ್ಯ ಅಕಾಡೆಮಿ ಮೌನ ವಹಿಸಿರುವುದು ಬೇಸರ ತಂದಿದೆ. ಲೇಖಕರ ಹಿತ ಕಾಪಾಡುವಲ್ಲಿ ಸಾಹಿತ್ಯ ಅಕಾಡೆಮಿ ವಿಫಲವಾಗಿದೆ’ ಎಂದು ಆರೋಪಿಸಿದರು.

‘ಜನರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ  ಜಾಲತಾಣಗಳ ಮೂಲಕ ಭಿನ್ನ ಅಭಿಪ್ರಾಯವುಳ್ಳವರನ್ನು ಅವಹೇಳನ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಇಂತಹ ಟೀಕೆಗಳನ್ನು ಬರಹಗಾರರು ನಿರ್ಲಕ್ಷಿಸಬೇಕು’  ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.