ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಸಲುವಾಗಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ನೀಡಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ₹10 ಕೋಟಿ ಮೊತ್ತದ ಚೆಕ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಮುಂಗಡವಾಗಿ ಬುಧವಾರ ಹಸ್ತಾಂತರ ಮಾಡಿತು.
ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಖಮರುಲ್ ಇಸ್ಲಾಂ ಅವರು ಚೆಕ್ ಅನ್ನು ಸಿಇಟಿ ಆಡಳಿತಾಧಿಕಾರಿ ಎಸ್.ಎನ್. ಗಂಗಾಧರಯ್ಯ ಅವರಿಗೆ ನೀಡಿದರು. ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ, ಸಿಖ್ ಮತ್ತು ಪಾರ್ಸಿ ಜನಾಂಗದ ವಿದ್ಯಾರ್ಥಿಗಳ ವೃತ್ತಿಪರ ಶಿಕ್ಷಣಕ್ಕೆ ಬಡ್ಡಿ ರಹಿತ ಸಾಲ ನೀಡಲು ಈ ಹಣ ಬಳಸಲಾಗುವುದು ಎಂದು ಸಚಿವರು ವಿವರಿಸಿದರು.
ಸಿಇಟಿ ಮೂಲಕ ಸೀಟು ಪಡೆಯುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಲ್ಲದೆ, ಕಾಮೆಡ್–ಕೆ ಮತ್ತು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ಮೂಲಕ ಸೀಟು ಪಡೆದ ವಿದ್ಯಾರ್ಥಿಗಳಿಗೂ ಬಡ್ಡಿ ರಹಿತ ಸಾಲ ನೀಡಲಾಗುವುದು ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಇದುವರೆಗೆ 3,889 ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ 100 ಮಂದಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದ್ದು, ಅಷ್ಟೂ ಮಂದಿಗೆ ಸಾಲ ನೀಡಲಾಗುವುದು ಎಂದು ಅವರು ವಿವರಿಸಿದರು. 2014–15ನೇ ಸಾಲಿನಲ್ಲಿ 1,859 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಾಲ ನೀಡಲಾಗಿತ್ತು ಎಂದು ಹೇಳಿದರು.
ಪ್ರವೇಶಕ್ಕೂ ಮುನ್ನವೇ ಸಾಲ ನೀಡುವ ‘ಅರಿವು’ ಯೋಜನೆ ಪ್ರಕಾರ ವಿದ್ಯಾರ್ಥಿ ಪ್ರವೇಶ ಪಡೆಯುವ ಕಾಲೇಜಿಗೇ ಕೆ.ಇ.ಎ ವತಿಯಿಂದ ನೇರವಾಗಿ ಹಣ ಸಂದಾಯ ಆಗುತ್ತದೆ. ವಿದ್ಯಾರ್ಥಿಯ ಕೈಗೆ ಚೆಕ್ ನೀಡುವುದಿಲ್ಲ ಎಂದು ಅವರು ತಿಳಿಸಿದರು.
ಆದಾಯ ಮಿತಿ ಏರಿಕೆ: ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಹಿಂದುಳಿದ ವರ್ಗಗಳ ಆದಾಯ ಮಿತಿಯನ್ನು ₹ 6 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ ಅಲ್ಪಸಂಖ್ಯಾತರ ಆದಾಯ ಮಿತಿಯನ್ನು ಈಗಿನ ₹4.5 ಲಕ್ಷದಿಂದ ₹ 6 ಲಕ್ಷಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇದರಿಂದ ಇನ್ನೂ ಹೆಚ್ಚಿನ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದು ಅವರು ವಿವರಿಸಿದರು.
ಸಾಲ ಮರುಪಾವತಿ: ಬಡ್ಡಿ ರಹಿತ ಸಾಲ ಪಡೆದವರು ಪ್ರತಿ ವರ್ಷ ಶೇ 10ರಷ್ಟು ಹಣವನ್ನು ಹಿಂದಿರುಗಿಸಬೇಕು. ಕೋರ್ಸ್ ಮುಗಿದ ನಂತರ ಬಾಕಿ ಹಣವನ್ನು ಮರುಪಾವತಿಸಬೇಕು. ಶೇ 2ರಷ್ಟು ಸೇವಾ ಶುಲ್ಕ ಬಿಟ್ಟು ಯಾವುದೇ ಶುಲ್ಕವನ್ನು ವಿದ್ಯಾರ್ಥಿಗಳಿಗೆ ವಿಧಿಸುವುದಿಲ್ಲ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
*
ಈ ವರ್ಷದ ಸಾಲ ಮಂಜೂರಾದ ವಿದ್ಯಾರ್ಥಿಗಳು
3,578 ಮುಸ್ಲಿಂ
215 ಕ್ರೈಸ್ತ
93 ಜೈನ
03 ಸಿಖ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.