ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಮಳೆಯು ಅವಧಿಗೆ ಮುನ್ನವೇ ಬಿದ್ದಿರುವುದರಿಂದ ಏರುತ್ತಿರುವ ಬೇಸಿಗೆಯ ಕಾವು ಕುಸಿಯುವ ಸಾಧ್ಯತೆಯಿದೆ.
ಸಾಮಾನ್ಯವಾಗಿ ಮಾರ್ಚ್ 15 ರಿಂದ ಮೇ ತಿಂಗಳ ಕೊನೆಯವರೆಗೆ ಬೇಸಿಗೆ ಮಳೆಯ (ಪೂರ್ವ ಮುಂಗಾರು) ಅವಧಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಈ ಬಾರಿ ಫೆಬ್ರುವರಿ ಕೊನೆಯ ವಾರದಲ್ಲಿಯೇ ಬೇಸಿಗೆ ಮಳೆ ಆರಂಭಗೊಂಡಿರುವುದರಿಂದ ವಾತಾವರಣದಲ್ಲಿ ಉಷ್ಣಾಂಶ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯಿದೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕೃಷಿ ವಿಶ್ವವಿದ್ಯಾಲಯದ ಹವಾಮಾನ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಬಿ.ರಾಜೇಗೌಡ, ‘ಮಧ್ಯಾಹ್ನದವರೆಗೆ ಬಿಸಿಲು ಕಾದು, ಉಷ್ಣಾಂಶ ಏರಿಕೆಯಾಗುತ್ತದೆ. ತಾಪಮಾನ ಏರಿಕೆಯಿಂದಾಗಿ, ಅಲ್ಲಲ್ಲಿ ಸ್ಥಳೀಯ ಮಟ್ಟದಲ್ಲಿ ಚದುರಿದ ಮೋಡಗಳು ಸಾಂದ್ರಗೊಳ್ಳುತ್ತದೆ. ಮಧ್ಯಾಹ್ನದ ನಂತರ ಗಾಳಿ ಸಹಿತ ಮಳೆ ಸುರಿಯುತ್ತದೆ. ಇದು ಬೇಸಿಗೆ ಮಳೆಯ ಲಕ್ಷಣ’ ಎಂದು ಹೇಳಿದರು.
‘ರಾಜ್ಯದ ನಾನಾ ಭಾಗಗಳಲ್ಲಿ ಅವಧಿಗೆ ಮುನ್ನವೇ ಬೇಸಿಗೆ ಮಳೆಯು ಸುರಿಯುತ್ತಿದೆ. ಹೆಚ್ಚಳಗೊಂಡಿರುವ ಉಷ್ಣಾಂಶ ಹಾಗೂ ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಹಿಂಗಾರು ಮಳೆಯ ಕೊರತೆ ಕೂಡ ಇದಕ್ಕೆ ಕಾರಣವಾಗಿದೆ’ ಎಂದು ವಿಶ್ಲೇಷಿಸಿದರು.
‘ಕಳೆದ ಎರಡು ವರ್ಷಗಳಿಂದ ಬೇಸಿಗೆ ಮಳೆಯು ಅವಧಿಗೆ ಮುನ್ನವೇ ಸುರಿಯುತ್ತಿದೆ. ಈ ಬಾರಿಯೂ ವಾಡಿಕೆ ಮಳೆಯ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೇಸಿಗೆ ಮಳೆಯನ್ನು ನಿರೀಕ್ಷಿಸಬಹುದಾಗಿದೆ’ ಎಂದರು.
‘ವ್ಯಾಪಕವಾಗಿ ಬೇಸಿಗೆ ಮಳೆ ಸುರಿದರೆ ವಾತಾವರಣದಲ್ಲಿ ಏರಿಕೆಯಾಗುವ ಉಷ್ಣಾಂಶ ತಹಬಂದಿಗೆ ಬರುತ್ತದೆ. ಆದರೆ, ಚದುರಿದ ಮೋಡಗಳು ಅಲ್ಲಲ್ಲಿ ಮಳೆ ಸುರಿಸುವುದರಿಂದ ಮಳೆಯೊಂದಿಗೆ, ಉಷ್ಣಾಂಶವೂ ಸಮಪ್ರಮಾಣದಲ್ಲಿರುತ್ತದೆ’ ಎಂದು ಅಭಿಪ್ರಾಯಪಟ್ಟರು.
ಬೆಳೆ ಸಂರಕ್ಷಿಸಿ: ‘ಜೋಳ, ಸೂರ್ಯಕಾಂತಿ, ತೊಗರಿ, ರಾಗಿ ಸೇರಿದಂತೆ ಕಟಾವು ಮಾಡಿದ ಬೆಳೆಗಳನ್ನು ಬೇಸಿಗೆ ಮಳೆಯಿಂದ ರೈತರು ಅಗತ್ಯವಾಗಿ ಸಂರಕ್ಷಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.