ಗುಲ್ಬರ್ಗ: ಬೀದರ್- ಹುಮನಾಬಾದ್ ಮಧ್ಯೆ `ಪುಷ್- ಪುಲ್' ಹೊಸ ರೈಲು ಸಂಚಾರಕ್ಕೆ ಮಹಾತ್ಮ ಗಾಂಧಿ ಜಯಂತಿ (ಅಕ್ಟೋಬರ್ 2) ದಿನ ಚಾಲನೆ ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಗುರುವಾರ ಇಲ್ಲಿ ಪ್ರಕಟಿಸಿದರು.
ರೈಲ್ವೆ ಖಾತೆ ವಹಿಸಿಕೊಂಡ ನಂತರ ಮೊದಲಬಾರಿ ನಗರಕ್ಕೆ ಆಗಮಿಸಿದ್ದ ಅವರು ಜಿಲ್ಲಾ ಕಾಂಗ್ರೆಸ್ ಸಮಿತಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಬೀದರ್- ಗುಲ್ಬರ್ಗ ರೈಲು ಯೋಜನೆ ಪ್ರಗತಿಯಲ್ಲಿದೆ. ಬೀದರ್-ಹುಮಾನಾಬಾದ್ ನಡುವಿನ 50 ಕಿ.ಮೀ ಹಳಿ ನಿರ್ಮಾಣ ಮುಗಿದು ಪ್ರಾಯೋಗಿಕ ರೈಲು ಸಂಚಾರವೂ ನಡೆದಿದೆ. ಆ ಭಾಗದ ಜನರಿಗೆ ಅನುಕೂಲವಾಗಲು ಹೊಸ ರೈಲು ಸೇವೆ ಆರಂಭಿಸಲಾಗುವುದು ಎಂದು ತಿಳಿಸಿದರು.
ಗುಲ್ಬರ್ಗ- ಹುಮನಾಬಾದ್ ನಡುವೆ ಮರಗುತ್ತಿ ಗುಡ್ಡದಲ್ಲಿ ಸುರಂಗ ಕೊರೆಯಲು ರೂ 60 ಕೋಟಿ, ಬೆಣ್ಣೆತೊರಾ ನದಿ ಮೇಲೆ ಸೇತುವೆ ನಿರ್ಮಿಸಲು ರೂ 20 ಕೋಟಿ ಮಂಜೂರು ಮಾಡಲಾಗಿದೆ. ಮೂರು ವರ್ಷಗಳಲ್ಲಿ ಬೀದರ್-ಗುಲ್ಬರ್ಗ ರೈಲು ಯೋಜನೆ ಪೂರ್ಣಗೊಳಿಸುವಂತೆ ಗಡುವುನೀಡಲಾಗಿದೆ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.