ADVERTISEMENT

ಅ.28ರಿಂದ ಬೆಂಗಳೂರು ಸಾಹಿತ್ಯ ಹಬ್ಬ

ದೇಶ, ವಿದೇಶಗಳ ಪ್ರಖ್ಯಾತ ಸಾಹಿತಿಗಳು, ಕಲಾವಿದರು ಪಾಲ್ಗೊಳ್ಳುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 19:30 IST
Last Updated 16 ಅಕ್ಟೋಬರ್ 2017, 19:30 IST
ಅ.28ರಿಂದ ಬೆಂಗಳೂರು ಸಾಹಿತ್ಯ ಹಬ್ಬ
ಅ.28ರಿಂದ ಬೆಂಗಳೂರು ಸಾಹಿತ್ಯ ಹಬ್ಬ   

ಬೆಂಗಳೂರು: ನಗರದಲ್ಲಿ ಅ.28 ಮತ್ತು 29ರಂದು ಬೆಂಗಳೂರು ಸಾಹಿತ್ಯ ಹಬ್ಬ ನಡೆಯಲಿದ್ದು,‌ ದೇಶ, ವಿದೇಶಗಳ ಹೆಸರಾಂತ ಸಾಹಿತಿಗಳು ಮತ್ತು ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಹಬ್ಬದ ಸಂಸ್ಥಾಪಕ ಶ್ರೀಕೃಷ್ಣ ರಾಮಮೂರ್ತಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಲಲಿತ್‌ ಅಶೋಕ್‌ ಹೋಟೆಲ್‌ನಲ್ಲಿ ನಡೆಯುವ ಸಾಹಿತ್ಯ ಹಬ್ಬಕ್ಕೆ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿಲಂಕೇಶ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಚಾಲನೆ ಸಿಗಲಿದೆ. ‘ಸ್ಪೀಕ್‌ ಅಪ್‌, ಸ್ಪೀಕ್‌ ಔಟ್‌’ ಈ ಬಾರಿ ಹಬ್ಬದ ಘೋಷ ವಾಕ್ಯವಾಗಿದೆ.

ಹಬ್ಬ ಎರಡೂ ದಿನಗಳು ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ. ಉದಯೋನ್ಮುಖ ಬರಹಗಾರರು, ಖ್ಯಾತನಾಮರು, ಪ್ರಕಾಶಕರು, ವಿದ್ಯಾರ್ಥಿಗಳು ಮತ್ತು ಓದುಗರನ್ನು ಒಂದೇ ವೇದಿಕೆಯಡಿ ಒಟ್ಟುಗೂಡಿಸಿ ಚಿಂತನೆಗೆ ಒರೆಹಚ್ಚುವ ವಿಷಯ ಚರ್ಚಿಸುವುದು ಹಬ್ಬದ ಮುಖ್ಯ ಉದ್ದೇಶ ಎಂದರು.

ADVERTISEMENT

ರಾಮಚಂದ್ರ ಗುಹಾ, ಪೆರುಮಾಳ್ ಮುರುಗನ್, ಪಾಲ್‌ ಝಕರಿಯಾ, ಅಂಬೈ, ಹರ್ದೀಪ್ ಸಿಂಗ್ ಪುರಿ, ಕಸುಕೇತು ಮೆಹ್ತಾ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಎನ್.ಎಸ್. ಮಾಧವನ್, ಗಿರೀಶ್ ಕಾರ್ನಾಡ್, ಸೋನಲ್ ಮಾನ್‌ಸಿಂಗ್, ಗಿಡಿಯೋನ್ ಹೇಗ್, ಟ್ವಿಂಕಲ್ ಖನ್ನಾ, ಕನ್ಹಯ್ಯ ಕುಮಾರ್, ಸವಿ ಶರ್ಮಾ, ವರುಣ್ ಅಗರ್‍ವಾಲ್ ಸೇರಿ ಹಲವು ಬರಹಗಾರರು, ಕ್ರೀಡಾಪಟುಗಳು ಹಾಗೂ ಕಲಾವಿದರು ಭಾಗವಹಿಸಲಿದ್ದಾರೆ ಎಂದರು.

ಇತಿಹಾಸ ತಜ್ಞ ಪ್ರೊ.ಷ.ಶೆಟ್ಟರ್ ಅವರು ಕನ್ನಡ ಭಾಷೆಯ ಉಗಮದ ಬಗ್ಗೆ ಮಾತನಾಡಲಿದ್ದಾರೆ. ಭಾರ್ಗವಿ ನಾರಾಯಣ್, ಇಂದಿರಾ ಲಂಕೇಶ್, ಡಾ.ವಿಜಯಾ, ಅಮ್ಮು ಜೋಸೆಫ್, ರೋಹಿಣಿ ಮೋಹನ್, ಹರೀಶ್ ಬಿಜ್ಜೂರ್ ಪಾಲ್ಗೊಳ್ಳಲಿದ್ದಾರೆ.

ಮಕ್ಕಳ ಸಾಹಿತ್ಯ ಮನರಂಜನೆಯೂ ಇರಲಿದೆ. ಮಕ್ಕಳಿಗೆ ಕಾರ್ಯಾಗಾರ, ಕಥೆ ಹೇಳುವುದು, ಸೃಜನಶೀಲ ಕ್ರೀಟಾಚಟುವಟಿಕೆಗಳು ನಡೆಯಲಿವೆ. ನಮ್‌ಕಂಪೆನಿ ಮತ್ತು ಕೀರ್ತನಾ ಕುಮಾರ್ ಅವರ ಥಿಯೇಟರ್‌ ಲ್ಯಾಬ್‌ನಿಂದ ರಂಗಕಲೆ ಕಲಿಕೆ ಮತ್ತು ರಂಗ ಪ್ರಯೋಗವೂ ನಡೆಯಲಿದೆ ಎಂದು ಹಬ್ಬದ ನಿರ್ದೇಶಕಿ ಶೈನಿ ಆಂಟನಿ ತಿಳಿಸಿದರು.

ಸಾಹಿತ್ಯ ಹಬ್ಬದಲ್ಲಿ ನತಾಲಿಯಾ ಅವರ ಪಿಯಾನೊ, ಜರ್ಮನ್ ಕವಿ ಜೆಸ್ಸಿ ಜೇಮ್ಸ್ ಅವರ ಕಾರ್ಯಕ್ರಮ ಹಾಗೂ ಅಮಾನ್ ಹಾಗೂ ಅಯಾನ್ ಅಲಿ ಬಂಗಷ್ ಅವರ ಸಿತಾರ್ ವಾದನ ಕೂಡ ಇರಲಿದೆ ಎಂದು ಉತ್ಸವದ ಸಲಹೆಗಾರ ವಿ.ರವಿಚಂದರ್‌ ಮಾಹಿತಿ ನೀಡಿದರು.

ಗದ್ಯ ಬರಹ, ಕಾದಂಬರಿ, ಜನಪ್ರಿಯ ಸಾಹಿತ್ಯ ಹಾಗೂ ಜೀವಮಾನ ಸಾಧನೆ ಹೀಗೆ ನಾಲ್ಕು ವಿಭಾಗಗಳಲ್ಲಿ ತಲಾ ₹50,000 ನಗದು ಒಳಗೊಂಡ ಪುರಸ್ಕಾರ ನೀಡಲಾಗುತ್ತಿದೆ.

ಪುರಸ್ಕೃತರ ಹೆಸರನ್ನು ಈ ಬಾರಿ ಹಬ್ಬಕ್ಕೂ ಮೊದಲೇ ಪ್ರಕಟಿಸಲಾಗುವುದು ಎಂದು ಆಟಾ ಗಲಾಟಾ ಪುಸ್ತಕ ಮಳಿಗೆಯ ಸುಬೋಧ್‌ ಶಂಕರ್‌ ತಿಳಿಸಿದರು.

ನೋಂದಣಿಗೆ: www.bangaloreliteraturefestival.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.