ಕಲಾವಿದರೊಬ್ಬರಿಗೆ ರಾಜ್ಯ ಸರ್ಕಾರದ ವತಿಯಿಂದಲ್ಲದೇ ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳು ದೊರೆತುಬಿಟ್ಟರೆ, ಅವರು ಹಿರಿಹಿರಿ ಹಿಗ್ಗುತ್ತಾರೆ. ಖ್ಯಾತನಾಮರ ಪಟ್ಟಿಗೆ ಸೇರುವುದಲ್ಲದೇ ಹಲವಾರು ಸೌಲಭ್ಯಗಳಿಗೂ ಪಾತ್ರರಾಗುತ್ತಾರೆ.
ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಹಿರಿಯ ಕಲಾವಿದ ಮುಖವೀಣೆ ಆಂಜನಪ್ಪ ಅವರು ಹಲವಾರು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾದರೂ ಯಾವುದೇ ಸೌಲಭ್ಯಗಳಿಲ್ಲದೇ ಸಂಕಷ್ಟಗಳನ್ನೇ ಸಂಗಾತಿಗಳನ್ನಾಗಿಸಿಕೊಂಡು ಪುಟ್ಟ ಮನೆಯಲ್ಲಿ ವಾಸವಿದ್ದಾರೆ.
ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗವಿಕುಂಟಹಳ್ಳಿ ಎಂಬ ಕುಗ್ರಾಮದಲ್ಲಿ ನೆಲೆಸಿರುವ ಆಂಜನಪ್ಪ ಅವರು ಮುಖವೀಣೆ ನುಡಿಸುವುದರಲ್ಲಿ ನಿಷ್ಣಾತರು. ದಲಿತ ಸಮುದಾಯದ ಆದಿಕರ್ನಾಟಕ ಜನಾಂಗಕ್ಕೆ ಸೇರಿದ ಅವರು ಮುಖವೀಣೆ ನುಡಿಸುವುದನ್ನೇ ಜೀವನಕ್ಕೆ ಆಧಾರವಾಗಿಸಿಕೊಂಡಿದ್ದಾರೆ.
ರಾಜ್ಯ ಜಾನಪದ ಕಲಾಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ಮನೆಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಪ್ರಶಸ್ತಿ ಫಲಕಗಳನ್ನು ತೋರಿಸುವ ಅವರು, `ಪ್ರಶಸ್ತಿಗಳು ಹಲವಾರು ಬಂದಿವೆ. ಆದರೆ ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ~ ಎಂದು ನೋವಿನಿಂದ ಹೇಳುತ್ತಾರೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಚಿಕ್ಕದಾಳವಟ್ಟ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಅವರ ಮನೆಯಲ್ಲಿ ಸಂಕಷ್ಟ ವ್ಯಾಪಕವಾಗಿತ್ತು. ಭಿಕ್ಷೆ ಬೇಡಿಕೆಕೊಂಡು ಹೊಟ್ಟೆ ತುಂಬಿಸಿಕೊಳ್ಳುವಂತಹ ಪರಿಸ್ಥಿತಿ ಇತ್ತು.
ತಾತಾ ಮತ್ತು ತಂದೆಯವರಿಂದ ಮುಖವೀಣೆ ನುಡಿಸುವುದನ್ನು ಕಲಿತ ಆಂಜನಪ್ಪ ಅದನ್ನೇ ಕಾಯಕವಾಗಿಸಿಕೊಂಡಿದ್ದಾರೆ. ಹದಿನಾಲ್ಕು ಮಕ್ಕಳಲ್ಲಿ ಒಂಬತ್ತು ಮಕ್ಕಳು ಅವರೊಂದಿಗೆ ಇದ್ದಾರೆ.
ಆದರೆ ಅವರ‌್ಯಾರೂ ಸಂಗೀತ ಕಲಿಯಲು ಆಸಕ್ತಿ ತೋರುತ್ತಿಲ್ಲ ಎಂಬ ನೋವು ಆಂಜನಪ್ಪ ಅವರಿಗೆ ಕಾಡುತ್ತಿದೆ.
ಆಂಧ್ರಪ್ರದೇಶ, ತಮಿಳುನಾಡು, ಕೇರಳ, ನವದೆಹಲಿ ಸೇರಿದಂತೆ ವಿವಿಧೆಡೆ ಸಂಚರಿಸಿ, ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. 1996ರಲ್ಲಿ ಜಾನಪದ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ. 1998ರಲ್ಲಿ ಜಾನಪದ ಕಲಾಶ್ರೀ ಪ್ರಶಸ್ತಿ, ಸ್ಟೇಟ್ ಬ್ಯಾಂಕ್ ಮೈಸೂರು ಸಂಸ್ಥೆಯ ರಾಜ್ಯೋತ್ಸವ ಪ್ರಶಸ್ತಿ, ಎಲ್‌ಎಚ್‌ಆರ್ ಪತ್ರಿಕಾ ಪ್ರಶಸ್ತಿ, ಎಲ್.ಬಸವರಾಜು ಪ್ರಶಸ್ತಿ, ಬಿ.ವಿ.ಕಾರಂತ ರಂಗಾಯಣ ಪ್ರಶಸ್ತಿ, ಆದರ್ಶಶೃಂಗ ಪ್ರಶಸ್ತಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಜಾನಪದ ಲೋಕೋತ್ಸವ ಪ್ರಶಸ್ತಿ, ಮೇಳಾದೇವಿ ಪ್ರಶಸ್ತಿ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳಿಗೆ ಅವರು ಪಾತ್ರರಾಗಿದ್ದಾರೆ.
`ಗ್ರಾಮದ ಬಳಿ ಜೀವನೋಪಾಯಕ್ಕಾಗಿ 4.5 ಎಕರೆ ಭೂಮಿಗೆ ಸರ್ಕಾರವು ಅಧಿಕೃತ ಸಾಗುವಳಿ ಚೀಟಿ ನೀಡಿತ್ತು. ಆದರೆ ಸಾಗುವಳಿ ಮಾಡಲು ಸಾಧ್ಯವಾಗದ ಕಾರಣ 2.5 ಎಕರೆ ಒಣಭೂಮಿ ಮಾತ್ರವೇ ಉಳಿದುಕೊಂಡಿದೆ~.
`ಪ್ರಶಸ್ತಿ, ಪುರಸ್ಕಾರಗಳನ್ನು ಸಂರಕ್ಷಿಸಿಡಲು ಮನೆಯು ಶಿಥಿಲಾವಸ್ಥೆಯಲ್ಲಿದೆ. ಆಶ್ರಯ ಮನೆ ನಿರ್ಮಾಣಕ್ಕೆ ಪಾಯ ಹಾಕಲಾಗಿದೆಯಾದರೂ ಮನೆ ಕಟ್ಟಲು ಕಾಸಿಲ್ಲ. ಮಕ್ಕಳು ಸಂಗೀತ ಕಲಿಯಲು ಆಸಕ್ತಿ ತೋರುತ್ತಿಲ್ಲ~.
`ಮುಂದಿನ ದಿನಗಳಲ್ಲಿ ಮುಖವೀಣೆ ಸಂಗೀತ ಉಳಿಯುವುದೋ ಅಥವಾ ಇಲ್ವೊ ಎಂಬುದು ಗೊತ್ತಿಲ್ಲ~ ಎಂದು ಆಂಜನಪ್ಪ ನೊಂದು ನುಡಿಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.