ಹುಬ್ಬಳ್ಳಿ: ‘ನಾನು ಈಗ ಇದ್ದೂ ಸತ್ತಾಂಗೆ. ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳೋಣ ಅನಿಸಿತ್ತು. ಆದರೆ, ಮಗಳಿಗೆ ಮತ್ತೊಂದು ಆಘಾತ ತಡೆದುಕೊಳ್ಳಲು ಆಗದು ಎಂಬ ಕಾರಣಕ್ಕೆ ಛಲದಿಂದ ಹೋರಾಡಲು ನಿರ್ಧರಿಸಿದೆ. ರಕ್ಷಿಸಬೇಕಾದ ಪೊಲೀಸರು, ನಮ್ಮಂಥವರ ವೋಟ್ನಿಂದ ಗೆದ್ದ ಜನಪ್ರತಿನಿಧಿಗಳು ನಮ್ಮ ವಿರುದ್ಧವೇ ನಿಂತಾಗ ಒಂದು ಕ್ಷಣ ದಿಕ್ಕು ತೋಚದಂತಾಗಿತ್ತು...’
ಸಾಮೂಹಿಕ ಅತ್ಯಾಚಾರದಿಂದ ಜರ್ಝರಿತಳಾಗಿ ಅಡಿಯಿಂದ ಮುಡಿವರೆಗೆ ಚಾದರ ಹೊದ್ದುಕೊಂಡು ಮಲಗಿದ್ದ ಹದಿಮೂರು ವರ್ಷದ ಬಾಲಕಿಯ ಪಕ್ಕ ನಿಂತಿದ್ದ ಆಕೆಯ ತಂದೆಯ ಈ ಮಾತುಗಳು ರೋಷಾವೇಶದೊಂದಿಗೆ ನಗರದ ಕಿಮ್ಸ್‌ನ ಪ್ರಸೂತಿ ಮತ್ತು ಸ್ತ್ರೀರೋಗ ವಾರ್ಡಿನ ಗೋಡೆಗಳಿಗೆ ಬಡಿಯುತ್ತಿದ್ದಾಗ ವಾರ್ಡಿನ ಇತರ ಹಾಸಿಗೆಗಳಲ್ಲಿದ್ದ ಮಹಿಳೆಯರ ಕಣ್ಣಾಲಿಗಳು ತುಂಬಿಬಂದವು.
ದೈಹಿಕ–ಮಾನಸಿಕ ನೋವಿನಿಂದ ಬಳಲುತ್ತಿದ್ದ ಬಾಲಕಿಗೆ ನ್ಯಾಯ ಒದಗಿಸಲು ಹಿಂದೇಟು ಹಾಕಿದ ಪೊಲೀಸರ ಉದಾಸೀನದ ಬೆನ್ನಲ್ಲೇ ಆಸ್ಪತ್ರೆಯಲ್ಲಿ ವಿವಿಧ ಪರೀಕ್ಷೆಗಳಿಗಾಗಿ ಬೆಳಿಗ್ಗೆಯಿಂದ ಅತ್ತಿಂದಿತ್ತ, ಇತ್ತಿಂದತ್ತ ಓಡಾಡಿಸಿದ್ದನ್ನು ಕಂಡ ಈ ವಾರ್ಡಿನ ಮಹಿಳೆಯರು ತಂದೆಯ ರೋದನ ಕಂಡು ಮರುಗಿದರು.
ಡಿಸೆಂಬರ್ 31ರ ರಾತ್ರಿ ಅಪಹರಣ ಮತ್ತು ಅತ್ಯಾಚಾರಕ್ಕೆ ಒಳಗಾದ ಹುಬ್ಬಳ್ಳಿ ತಾಲ್ಲೂಕು ಬುಡರಸಿಂಗಿ ಗ್ರಾಮದ ವಿದ್ಯಾರ್ಥಿನಿಯನ್ನು ಬುಧವಾರ (ಜನವರಿ 1) ತಡರಾತ್ರಿ ಒಂದು ಗಂಟೆಗೆ ಕಿಮ್ಸ್‌ಗೆ ದಾಖಲಿಸಲಾಗಿದೆ. ಆದರೆ, ಇಲ್ಲಿ ಮಧ್ಯಾಹ್ನದವರೆಗೂ ಆಕೆಗೆ ವಿಶ್ರಾಂತಿ ಸಿಗಲಿಲ್ಲ. ನೋವು, ಅವಮಾನದಿಂದ ಬಳಲಿದ್ದ ಆಕೆಗೆ ಸಾಲು ಸಾಲು ಪರೀಕ್ಷೆಗಳೂ ಕಾದಿದ್ದವು. ಆಸ್ಪತ್ರೆಯ ತಳ ಅಂತಸ್ತಿನಿಂದ ನೆಲ ಅಂತಸ್ತಿಗೆ, ಅಲ್ಲಿಂದ ಮೊದಲ ಅಂತಸ್ತಿಗೆ ಓಡಾಡಿ ರಕ್ತ ಪರೀಕ್ಷೆ, ಬಟ್ಟೆಗಳ ಪರಿಶೀಲನೆ, ಗಾಯಗಳ ತಪಾಸಣೆಗೆ ಮೈಯೊಡ್ಡುವುದು ಆಕೆಗೆ ಅನಿವಾರ್ಯವಾಗಿತ್ತು. ಹದಿನೈದಕ್ಕೂ ಹೆಚ್ಚು ಹಾಸಿಗೆಗಳಿರುವ ದೊಡ್ಡ ಕೊಠಡಿಯಲ್ಲಿಯೇ ಆಕೆಯ ಆರೈಕೆಯೂ ನಡೆಯಿತು.
‘ಇಂಥ ವಿಶೇಷ ಪ್ರಕರಣಗಳಲ್ಲಿ ಸಂತ್ರಸ್ತರನ್ನು ಪ್ರತ್ಯೇಕವಾಗಿರಿಸಿ ಆರೈಕೆ ಮಾಡುವ ಸವಲತ್ತು ಕಿಮ್ಸ್‌ನಲ್ಲಿಲ್ಲ. ದೌರ್ಜನ್ಯಕ್ಕೆ ಒಳಗಾದ ಬಾಲಕಿ ಅಥವಾ ಮನೆ ಮಂದಿ ಬಯಸಿದರೆ ಮೂರು ಹಾಸಿಗೆ ಇರುವ ಕೊಠಡಿಗೆ ಸ್ಥಳಾಂತರಿಸಲಾಗುವುದು’ ಎಂದು ಕಿಮ್ಸ್ ಮಾಜಿ ನಿರ್ದೇಶಕ ಮತ್ತು ಪ್ರಸೂತಿ–ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ. ಎಂ.ಜಿ.ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.
ಕರಾಳ ರಾತ್ರಿಯ ಆ ದಿನ
ಅತ್ಯಾಚಾರಕ್ಕೆ ಒಳಗಾದ ಬಾಲಕಿ ಮತ್ತು ಆಕೆಯ ಮನೆ ಮಂದಿ ಪಾಲಿಗೆ ಮಂಗಳವಾರ ಮತ್ತು ಬುಧವಾರ ಕರಾಳ ರಾತ್ರಿಗಳಾಗಿದ್ದವು. ಮಂಗಳವಾರ ರಾತ್ರಿ 9.30ರ ಸುಮಾರಿಗೆ ಬಹಿರ್ದೆಸೆಗೆಂದು ಹೊರ ಬಂದ ಬಾಲಕಿಯನ್ನು ಪರಶುರಾಮ ಮಾಗಡಿ, ಮನೋಹರ ರಾಣೋಜಿ ಮತ್ತು ನಾಗಪ್ಪ ರಾಣೋಜಿ ಅಪಹರಿಸಿಕೊಂಡು ಹೋಗಿದ್ದರು.
ವಿಷಯ ತಿಳಿದ ಬಾಲಕಿಯ ತಂದೆ ಮತ್ತು ಇಬ್ಬರು ಚಿಕ್ಕಪ್ಪಂದಿರು ವ್ಯಾನೊಂದರಲ್ಲಿ ಬೆನ್ನು ಹತ್ತಿದರು. ಹುಡುಕಾಟದ ನಂತರ ಹಾವೇರಿಯ ನೆಲೋಗಲ್ ಗ್ರಾಮದಲ್ಲಿ ಬುಧವಾರ ನಸುಕಿನಲ್ಲಿ ಅತ್ಯಾಚಾರ ನಡೆಯುವುದನ್ನು ಕಣ್ಣಾರೆ ಕಂಡಿದ್ದಾರೆ. ಇವರನ್ನು ಕಂಡ ಆರೋಪಿಗಳು ಪರಾರಿಯಾಗಲು ಪ್ರಯತ್ನಿಸಿದರು. ‘ಅವರಲ್ಲಿ ಪರಶುರಾಮನನ್ನು ಹಿಡಿದ ನಾವು ಆತನನ್ನು ಹಾವೇರಿ ಪೊಲೀಸರಿಗೆ ಒಪ್ಪಿಸಿದೆವು’ ಎಂದರು.
ದುರ್ದೈವಿ ನಾನು...
‘ಮಗಳ ಮೇಲೆ ನಡೆದ ಅತ್ಯಾಚಾರವನ್ನು ಕಣ್ಣಾರೆ ಕಂಡ ದುರ್ದೈವಿ ನಾನು. ಆ ಕ್ಷಣದಲ್ಲಿ ನಮಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಜೋರಾಗಿ ಮಗಳ ಹೆಸರು ಕೂಗಿದೆವು. ಇದನ್ನು ಕೇಳಿ ಆ ದುರುಳರು ಆಕೆಯನ್ನು ಬಿಟ್ಟುಬಿಟ್ಟರು’ ಎಂದು ವಿವರಿಸುವಾಗ ತಂದೆಯಲ್ಲಿ ರೋಷ ಹೊತ್ತಿ ಉರಿಯುತ್ತಿತ್ತು.
‘ದೌರ್ಜನ್ಯಕ್ಕೆ ಒಳಗಾದ ಮಗಳಿಗೆ ನ್ಯಾಯ ಒದಗಿಸಲು ಕುಂದಗೋಳ ಪೊಲೀಸರು ಹಿಂದೇಟು ಹಾಕಿದರು. ಸ್ಥಳೀಯ ಜನಪ್ರತಿನಿಧಿ ಸಾಂತ್ವನ ಹೇಳುವುದು ಬಿಟ್ಟು, ಗದರಿಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದರು. ಹೀಗಾಗಿ ಬುಧವಾರ ರಾತ್ರಿವರೆಗೂ ನ್ಯಾಯಕ್ಕಾಗಿ ಅಲೆದಾಡಬೇಕಾಗಿ ಬಂತು. ರಾತ್ರಿ ಒಂದು ಗಂಟೆಗೆ ಕಿಮ್ಸ್‌ಗೆ ಬಂದ ನಾವು ಇನ್ನೂ ಒಂದು ಕ್ಷಣ ನಿದ್ದೆ ಮಾಡಲಿಲ್ಲ. ಮಲಗಿದರೆ ನಿದ್ದೆ ಬರುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು ಅವರು.
ಇಬ್ಬರು ಶಂಕಿತರು ವಶಕ್ಕೆ
ಧಾರವಾಡ: ಹುಬ್ಬಳ್ಳಿ ತಾಲ್ಲೂಕಿನ ಬುಡರಸಿಂಗಿ ಗ್ರಾಮದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಗೋಳ ಠಾಣೆಯ ಪೊಲೀಸರು ಇಬ್ಬರು ಶಂಕಿತರನ್ನು ಗುರುವಾರ ವಶಕ್ಕೆ ಪಡೆದುಕೊಂಡಿದ್ದಾರೆ.
‘ಬಾಲಕಿಯನ್ನು ಅಪಹರಿಸಿದ ಮೂವರು ಆಕೆಯ ಮೇಲೆ ಹಾವೇರಿ ಜಿಲ್ಲೆಯ ನೆಲೋಗಲ್ ಬಳಿ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಇಬ್ಬರು ಶಂಕಿತರನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಅವರನ್ನು ಬಂಧಿಸಿಲ್ಲ. ವೈದ್ಯಕೀಯ ತಪಾಸಣೆಗಾಗಿ ಬಾಲಕಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಬುಧವಾರ ರಾತ್ರಿ ದಾಖಲಿಸಲಾಗಿದೆ. ವೈದ್ಯಕೀಯ ವರದಿ ಬಂದ ಬಳಿಕ ಆರೋಪಿಗಳನ್ನು ಅಧಿಕೃತವಾಗಿ ಬಂಧಿಸುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಲೋಕೇಶಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಘಟನೆ ನಡೆದುದು ಹಾವೇರಿ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ. ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆಯೋ ಇಲ್ಲವೋ ಎಂಬುದು ತನಿಖೆಯ ನಂತರ ಗೊತ್ತಾಗುತ್ತದೆ. ಆದರೆ, ಬಾಲಕಿ ಹಾಗೂ ಆಕೆಯ ತಂದೆ ಈ ಸಂಬಂಧ ದೂರು ನೀಡಲು ಮುಂದಾದಾಗ ಹಾವೇರಿ ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿಕೊಳ್ಳಬೇಕಿತ್ತು. ನಂತರ ಧಾರವಾಡ ಜಿಲ್ಲಾ ವ್ಯಾಪ್ತಿಯ ಕುಂದಗೋಳ ಠಾಣೆಗೆ ವರ್ಗಾಯಿಸಬೇಕಾಗಿತ್ತು. ಕುಂದಗೋಳ ಪೊಲೀಸರೂ ಬಾಲಕಿಯ ಪೋಷಕರನ್ನು ಸತಾಯಿಸದೇ ಪ್ರಕರಣ ದಾಖಲಿಸಿಕೊಳ್ಳಬೇಕಿತ್ತು. ಪೋಷಕರು ನನ್ನ ಕಚೇರಿವರೆಗೆ ಬರುವ ಸಂದರ್ಭ ಎದುರಾಗ-ಬಾರದಿತ್ತು’ ಎಂದೂ ಅವರು ಹೇಳಿದರು.
ಏತನ್ಮಧ್ಯೆ, ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ‘ಜಿಲ್ಲೆಯ ಪ್ರಭಾವಿ ಶಾಸಕರೊಬ್ಬರು, ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಿ. ನಿಮಗೆ ಕೇಳಿದಷ್ಟು ಹಣ ನೀಡುತ್ತೇವೆ ಎಂದು ಆಮಿಷ ಒಡ್ಡಲು ತಮ್ಮ ಪ್ರತಿನಿಧಿಯನ್ನು ನಮ್ಮ ಬಳಿ ಕಳುಹಿಸಿದ್ದರು’ ಎಂದು ಬಾಲಕಿಯ ಚಿಕ್ಕಪ್ಪ ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ನಿರಾಕರಿಸಿರುವ ಆ ಶಾಸಕರು, ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.