ADVERTISEMENT

ಆದಿವಾಸಿ ಕುಟುಂಬದ ಮನೆ ನಿರ್ಮಾಣಕ್ಕೆ ₹4.50 ಲಕ್ಷ

ಮಹೇಶ ಕನ್ನೇಶ್ವರ
Published 17 ಮಾರ್ಚ್ 2018, 19:30 IST
Last Updated 17 ಮಾರ್ಚ್ 2018, 19:30 IST
ಕೊರಗ ಸಮುದಾಯ: ವಿಕಿಪೀಡಿಯಾ
ಕೊರಗ ಸಮುದಾಯ: ವಿಕಿಪೀಡಿಯಾ   

ಮಂಗಳೂರು: ರಾಜ್ಯದ ಕಲವು ಜಿಲ್ಲೆಗಳಲ್ಲಿ ವಾಸವಾಗಿರುವ ಆದಿವಾಸಿ ಕೊರಗ ಹಾಗೂ ಜೇನುಕುರುಬ ಸಮುದಾಯದ ಫಲಾನುಭವಿಗಳ ಮನೆ ಘಟಕ ನಿರ್ಮಾಣ ವೆಚ್ಚ ಹೆಚ್ಚಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಂ.ಆರ್. ರವಿ ಅವರು ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಗೆ ಹಸಿರು ನಿಶಾನೆ ಸಿಕ್ಕಿದೆ.

ಜಿಲ್ಲಾ ಪಂಚಾಯಿತಿ ಸಲ್ಲಿಸಿದ ಪ್ರಸ್ತಾವನೆ ಸಾಧಕ ಬಾಧಕ ಪರಿಶೀಲಿಸಿ, ಮನೆಗಳ ಸುಸಜ್ಜಿತ ಘಟಕ ನಿರ್ಮಾಣ ವೆಚ್ಚವನ್ನು ₹ 2 ಲಕ್ಷದಿಂದ ₹ 4.50 ಲಕ್ಷಕ್ಕೆ ಹೆಚ್ಚಳ ಮಾಡಿ ಇದೀಗ ಸರ್ಕಾರ ಮಂಜೂರಾತಿ ನೀಡಿದೆ. ಮೈಸೂರು, ಚಾಮರಾಜನಗರ, ಕೊಡಗು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಾಸ ಇರುವ ಕೊರಗ ಹಾಗೂ ಜೇನುಕುರುಬ ಜನಾಂಗದ ಫಲಾನುಭವಿಗಳು ಇದರ ಪ್ರಯೋಜನವನ್ನು ಇನ್ನಾದರೂ ಪಡೆದಾರು ಎಂಬ ಆಶಾಭಾವನೆ ಮೂಡಿದೆ.

ಈ ಹಿಂದೆ ಸರ್ಕಾರ ಮನೆ ನಿರ್ಮಾಣಕ್ಕೆ ₹2 ಲಕ್ಷ ಅನುದಾನ ಮಾತ್ರ ನೀಡುತ್ತಿತ್ತು. ಗುಡ್ಡಗಾಡು ಪ್ರದೇಶಗಳಲ್ಲಿ ವಾಸವಾಗಿರುವ ಕಾರಣಕ್ಕೆ ಈ ಜನಾಂಗದವರ ಮನೆ ನಿರ್ಮಾಣಕ್ಕೆ ನೀಡುವ ಅನುದಾನ ಸಾಕಾಗದೆ, ಮನೆ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದ್ದರು. ಇದರಿಂದಾಗಿ ಮೂಲನಿವಾಸಿಗಳಿಗೆ ಮನೆ ನಿರ್ಮಿಸಿ ಕೊಡುವ
ಸರ್ಕಾರದ ಯೋಜನೆಗೂ ಹಿನ್ನಡೆ ಆಗಿತ್ತು.

ADVERTISEMENT

ಮನೆ ನಿರ್ಮಿಸಿಕೊಳ್ಳುವ ಫಲಾನುಭವಿಗಳು ವಾಸಿಸುವ ಸ್ಥಳ ತಲುಪುವುದಕ್ಕೆ ಸೂಕ್ತ ಸಂಪರ್ಕ ವ್ಯವಸ್ಥೆ ಇಲ್ಲದೆ ಇರುವುದರಿಂದ, ಮನೆ ನಿರ್ಮಾಣಕ್ಕೆ ಬೇಕಾಗುವ ಕಚ್ಚಾ ಸಾಮಗ್ರಿಗಳನ್ನು ಸಾಗಣೆ ಮಾಡುವುದಕ್ಕೆ ಅಧಿಕ ವೆಚ್ಚ ತಗಲುತ್ತಿತ್ತು. ಸರ್ಕಾರ ನೀಡುವ ಈ ಅನುದಾನ  ಕಚ್ಚಾ ಸಾಮಗ್ರಿ ಖರೀದಿಗೆ ಖರ್ಚಾಗುತ್ತಿತ್ತು. ಈ ಜನಾಂಗದವರು ಈ ಕಾರಣಕ್ಕಾಗಿಯೇ ವಸತಿ ಸೌಲಭ್ಯ ಪಡೆಯುವುದಕ್ಕೆ ಹಿಂದೇಟು ಹಾಕುತ್ತಿದ್ದರು.

ಇದನ್ನು ಮನಗಂಡ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹೆಚ್ಚುವರಿ ಅನುದಾನಕ್ಕೆ ಮೊರೆ ಹೋಗಿತ್ತು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಒಗ್ಗೂಡಿಸಿ ವಸತಿ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಹೆಚ್ಚುವರಿ ಅನುದಾನಕ್ಕೆ ವಿನಂತಿಸಿತ್ತು.

ಸರ್ಕಾರ ನಿಗದಿಪಡಿಸಿದಂತೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ₹2.75 ಲಕ್ಷ  (ಒಂದು ಘಟಕಕ್ಕೆ) ರಾಜ್ಯದಲ್ಲಿ ಭೌತಿಕ ಗುರಿ ಹೊಂದಲಾಗಿರುವ 218 ಘಟಕ ನಿರ್ಮಾಣಕ್ಕೆ ₹599.50 ಲಕ್ಷ ಮಂಜೂರಾತಿ ನೀಡಿದೆ.  ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ತಲಾ ಒಂದು ಘಟಕ ನಿರ್ಮಾಣಕ್ಕೆ ಅರ್ಹ ಫಲಾನುಭವಿಗೆ ₹1.75 ಲಕ್ಷದಂತೆ ₹381.50 ಲಕ್ಷ ಹೆಚ್ಚುವರಿ ಅನುದಾನವನ್ನು ಜಿಲ್ಲಾಧಿಕಾರಿ ಪಿಡಿ ಖಾತೆಗೆ ಬಿಡುಗಡೆ ಮಾಡಲಾಗಿದೆ ಎಂದು ಸಿಇಒ ಡಾ. ರವಿ ತಿಳಿಸಿದ್ದಾರೆ.

ಮುಖ್ಯವಾಹಿನಿಗೆ ಕೊರಗರು
ಸುಸಜ್ಜಿತ ಮನೆ ನಿರ್ಮಾಣ ಮಾಡುವುದು ಎಲ್ಲರ ಕನಸು. ಈ ಹಿಂದೆ ಗಿರಿಜನ ಸಮಗ್ರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕೊರಗ ಜನಾಂಗದವರಿಗೆ ಮನೆ ನಿರ್ಮಾಣಕ್ಕೆ ₹ 2 ಲಕ್ಷ ಮಾತ್ರ ನೀಡಲಾಗುತ್ತಿತ್ತು. ಈಗ ಸರ್ಕಾರ ಎರಡೂ ಇಲಾಖೆ ಒಗ್ಗೂಡಿಸಿ ದೊಡ್ಡ ಮೊತ್ತವನ್ನು ಮನೆ ನಿರ್ಮಾಣಕ್ಕೆ ನೀಡುತ್ತಿರುವುದು ಫಲಾನುಭವಿಗಳಲ್ಲಿ ಖುಷಿ ತಂದಿದೆ. ಜಿಲ್ಲೆಯಲ್ಲಿ ಆದಿವಾಸಿ ಬುಡಕಟ್ಟು ಕೊರಗ ಜನಾಂಗವನ್ನು ಸಮಾಜ ಮುಖ್ಯವಾಹಿನಿಗೆ ತರಲು ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ. ಈಗ ಸರ್ಕಾರ ₹4.50 ಲಕ್ಷ ಅನುದಾನವನ್ನು ನೀಡುತ್ತಿದೆ ಎಂದು ದ.ಕ.ಜಿಲ್ಲಾ ಪಂಚಾಯಿತಿ ಸಿಇಒ ಡಾ. ಎಂ.ಆರ್‌. ರವಿ ಹೇಳಿದರು.

**

ಜಿಲ್ಲಾವಾರು ಮನೆ ನಿರ್ಮಾಣ, ಅನುದಾನ ಬಿಡುಗಡೆ ವಿವರ

ಜಿಲ್ಲೆ/ ಭೌತಿಕ ಗುರಿ/  ಪರಿಶಿಷ್ಟ ವರ್ಗಗಳ ಇಲಾಖೆ/ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ

ಮೈಸೂರು    63     ₹ 173.25 ಲಕ್ಷ     ₹110.25 ಲಕ್ಷ

ಚಾಮರಾಜನಗರ   55    ₹151 ಲಕ್ಷ      ₹96 ಲಕ್ಷ

ಕೊಡಗು     40     ₹110 ಲಕ್ಷ     ₹70 ಲಕ್ಷ

ಉಡುಪಿ     30      ₹82.50 ಲಕ್ಷ    ₹52.50 ಲಕ್ಷ

ದಕ್ಷಿಣ ಕನ್ನಡ  30    ₹82.50 ಲಕ್ಷ    ₹52.50 ಲಕ್ಷ

ಒಟ್ಟು  218      ₹599.50 ಲಕ್ಷ    ₹381.50 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.