ADVERTISEMENT

ಆದಿ ಪನ್ನಂಗಾಲ ತಮ್ಮೆ ದೇವಿ ವಾರ್ಷಿಕೋತ್ಸವ:ಕತ್ತಿಯಿಂದ ಹೊಡೆದುಕೊಂಡು ಭಕ್ತರ ನರ್ತನ!

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2012, 19:30 IST
Last Updated 13 ಏಪ್ರಿಲ್ 2012, 19:30 IST
ಆದಿ ಪನ್ನಂಗಾಲ ತಮ್ಮೆ ದೇವಿ ವಾರ್ಷಿಕೋತ್ಸವ:ಕತ್ತಿಯಿಂದ ಹೊಡೆದುಕೊಂಡು ಭಕ್ತರ ನರ್ತನ!
ಆದಿ ಪನ್ನಂಗಾಲ ತಮ್ಮೆ ದೇವಿ ವಾರ್ಷಿಕೋತ್ಸವ:ಕತ್ತಿಯಿಂದ ಹೊಡೆದುಕೊಂಡು ಭಕ್ತರ ನರ್ತನ!   

ನಾಪೋಕ್ಲು: ಇಲ್ಲಿ ದೇವಿಗೆ ಭಕ್ತಿ ತೋರುವ ಪರಿಯೇ ಭಿನ್ನ. ದೇವಿ ಮೈಮೇಲೆ ಬಂದ ಕೆಲ ಭಕ್ತರು ಕೆಂಪು ಮಡಿಯುಟ್ಟು ಕತ್ತಿ ಹಿಡಿದು ನರ್ತಿಸಿದರು. ಅದರಿಂದಲೇ ತಲೆಗೆ ಹೊಡೆದುಕೊಂಡರು. ತಲೆಯಿಂದ ರಕ್ತ ಧಾರಾಕಾರವಾಗಿ ಸುರಿಯಿತು. 

ಸಮೀಪದ ಕಕ್ಕಬ್ಬೆಯ ಯವಕಪಾಡಿ ಗ್ರಾಮದಲ್ಲಿ ಆದಿ ಪನ್ನಂಗಾಲತಮ್ಮೆ ದೇವಿಯ ವಾರ್ಷಿಕೋತ್ಸವದಲ್ಲಿ ಶುಕ್ರವಾರ ಕಂಡ ದೃಶ್ಯವಿದು.ತಕ್ಕರ ಮನೆಯಿಂದ ಭಂಡಾರ ತರುವುದರೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಯಿತು. ಬಳಿಕ ದೇವಿಯನ್ನು ದೇವಾಲಯದಿಂದ ಕೆಳಗಿನ ಬನಕ್ಕೆ ತರಲಾಯಿತು. ದೇವಿ ಮೈಮೇಲೆ ಬರುವ ವ್ಯಕ್ತಿಗಳು ತಮ್ಮ ತಲೆಯ ಮೇಲೆ ಕತ್ತಿಯಿಂದ ಕಡಿದುಕೊಳ್ಳುವುದೇ ಈ ಹಬ್ಬದ ಮುಖ್ಯ ಆಚರಣೆ. ಹೂಂಕರಿಸುತ್ತ ತಲೆಗೆ ಕತ್ತಿಯಿಂದ ಹೊಡೆದುಕೊಂಡು ಭಕ್ತರು ಆವೇಶಭರಿತರಾಗಿ ನರ್ತಿಸುವ ದೃಶ್ಯವನ್ನು ನೂರಾರು ಭಕ್ತರು ದಿಗ್ಭ್ರಮೆಯಿಂದ ವೀಕ್ಷಿಸಿದರು.

ನಾಲ್ಕುನಾಡಿನ ಯವಕಪಾಡಿ ಗ್ರಾಮದಲ್ಲಿ ನೆಲೆನಿಂತಿರುವ ಪೊನ್ನಂಗಾಲ ತಮ್ಮೆ ದೇವಿಯ ಉತ್ಸವ ಹಲವಾರು ವರ್ಷಗಳಿಂದ ನಡೆದುಬರುತ್ತಿದೆ. ಕೇರಳ ರಾಜ್ಯದಿಂದ ಕೊಡಗಿಗೆ ಆಗಮಿಸಿದ ಇಗ್ಗುತ್ತಪ್ಪ, ಪಾಲೂರಪ್ಪ, ತಿರುನೆಲ್ಲಿ ಪೆಮ್ಮಯ್ಯ ಸಹೋದರರ ತಂಗಿ ಪನ್ನಂಗಾಲ ತಮ್ಮೆ ಎನ್ನಲಾಗಿದೆ.

ವಾರ್ಷಿಕ ಹಬ್ಬದಂದು ಉತ್ಸವದ ಆಚರಣೆಯಲ್ಲಿ ಪಾಲ್ಗೊಳ್ಳುವ ತಿರೊಳದವರು (ದೇವರು ಮೈಮೇಲೆ ಬರುವುದು) ಹತ್ತು ಹನ್ನೆರಡು ಮಂದಿ ಇರುತ್ತಾರೆ. ಕರಿಚಂಡಿ, ಮುಂಜಾಹುಂಡಿ, ಅಯ್ಯಪ್ಪ, ಚಾಮುಂಡಿ ಮುಂತಾದ ತಿರೋಳದವರು ಪ್ರತಿ ವರ್ಷ ಉತ್ಸವದಲ್ಲಿ ಪಾಲ್ಗೊಂಡು ದೇವರು ಆವಾಹನೆಯಾದ ಸಂದರ್ಭ ಕತ್ತಿಯಿಂದ ತಲೆಗೆ ಹೊಡೆದುಕೊಳ್ಳುವ ದೃಶ್ಯ ಮೈ ನವಿರೇಳಿಸುತ್ತದೆ.

ಕತ್ತಿ ತಗಲಿಸಿ ರಕ್ತ ಸುರಿಸಿಕೊಂಡವರು ನಂತರ ಔಷಧ ಹಚ್ಚಿ ಗಾಯ ಗುಣಪಡಿಸಿಕೊಳ್ಳುತ್ತಾರೆ. ದೇವರ ವಿಗ್ರಹವನ್ನು ಹಬ್ಬದ ದಿನ ಶುದ್ಧ ಕಲಶ ಮಾಡಿ ಹೊರಗೆ ತಂದು ದೇವಾಲಯಕ್ಕೆ ಪ್ರದಕ್ಷಿಣೆ ತರಲಾಗುತ್ತದೆ. ಆಗ ದೇವರ ವಿಗ್ರಹ ಹೊತ್ತವನು ಕಣ್ಣುಮುಚ್ಚಿಕೊಂಡು ಪ್ರದಕ್ಷಿಣೆ ಬರುವುದು ವಿಶೇಷತೆ.

ಪ್ರತಿವರ್ಷ ಪನ್ನಂಗಾಲ ತಮ್ಮೆ ದೇವಿಯ ವಾರ್ಷಿಕ ಉತ್ಸವ ಆಚರಿಸಲಾಗುತ್ತಿದ್ದು ಒಂದು ವರ್ಷ ಕೊಡೆ ಹಬ್ಬವನ್ನಾಗಿ ಆಚರಿಸಿದರೆ ಮರುವರ್ಷ ಸಣ್ಣ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ವಿವಿಧ ದೈವಿಕ ಆಚರಣೆಗಳ ಜರುಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.