ಬೆಂಗಳೂರು: ಇಲ್ಲಿಗೆ ಸಮೀಪದ ಆನೇಕಲ್ ತಾಲ್ಲೂಕಿನ ಹುಸ್ಕೂರು ಕೆರೆಯಲ್ಲಿ ಬೀಡು ಬಿಟ್ಟಿದ್ದ 14 ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಗೆ ವೇಗ ಸಿಕ್ಕಿದೆ. ಸಾರ್ವಜನಿಕರ ಚೇಷ್ಟೆಯಿಂದ ರೋಷಗೊಂಡ ಆನೆಗಳು ದಾಳಿ ನಡೆಸಿದ್ದರಿಂದ ಇಬ್ಬರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
`ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಿಂದ ಬಂದಿರುವ 14 ಆನೆಗಳು ಐದಾರು ದಿನಗಳ ಹಿಂದೆ ಮಾಲೂರು ಸಮೀಪದ ತೋಪಿನಲ್ಲಿ ಬೀಡುಬಿಟ್ಟಿದ್ದವು. ಮಾಲೂರಿನಿಂದ ಭಾನುವಾರ ಹೊಸಕೋಟೆ ತಾಲ್ಲೂಕಿನ ಹಾರೋಹಳ್ಳಿ ಕೆರೆಗೆ ಬಂದಿದ್ದ ಆನೆಗಳು ಸೋಮವಾರ ಹುಸ್ಕೂರು ಕೆರೆ ಸೇರಿವೆ. ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಆರಂಭಿಸಲಾಗಿದೆ. ಆದರೆ, ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರಿಂದಲೇ ತೊಂದರೆಯೇ ಹೆಚ್ಚಾಯಿತು' ಎಂದು ಬೆಂಗಳೂರು ಗ್ರಾಮಾಂತರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ತಿಳಿಸಿದರು.
`ಅರಣ್ಯ ಇಲಾಖೆಯ 150 ಮಂದಿ ಸಿಬ್ಬಂದಿ ಹಾಗೂ ಸುಮಾರು 200 ಮಂದಿ ಪೊಲೀಸರು ಸ್ಥಳದಲ್ಲಿದ್ದು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಬನ್ನೇರುಘಟ್ಟದ ಸಾಕಾನೆ ವನರಾಜನ ಸಹಾಯದಿಂದ ಮೊದಲು ಕಾರ್ಯಾಚರಣೆ ನಡೆಸಲಾಯಿತು. ನಂತರ ಮೈಸೂರಿನ ಅಭಿಮನ್ಯು, ಶ್ರೀರಾಮ, ಗಜೇಂದ್ರ ಸೇರಿದಂತೆ ನಾಲ್ಕು ಆನೆಗಳ ಸಹಾಯದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ' ಎಂದು ಅವರು ಹೇಳಿದರು.
`ಚಂದಾಪುರ, ಮರಸೂರು ಕೆರೆ, ಕುಂಬಾರನಹಳ್ಳಿ, ಆನೇಕಲ್ ಹೊರವಲಯದ ಮಾರ್ಗವಾಗಿ ಮುತ್ಯಾಲಮಡುವು ಅರಣ್ಯ ಪ್ರದೇಶದ ಮೂಲಕ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಆನೆಗಳನ್ನು ಅಟ್ಟುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ತಿಂಗಳ ಬೆಳಕು ಚೆನ್ನಾಗಿದ್ದರೆ ರಾತ್ರಿ ಇಡೀ ಕಾರ್ಯಾಚರಣೆ ಮುಂದುವರಿಸಲಾಗುವುದು. ಕತ್ತಲಾಗುತ್ತಿದ್ದಂತೆ ಕಾರ್ಯಾಚರಣೆ ಸ್ಥಳದಲ್ಲಿ ಜನ ದಟ್ಟಣೆಯೂ ಕಡಿಮೆಯಾಗಿದೆ' ಎಂದರು.
ಆನೆ ಕಾರಿಡಾರ್: ರೂ 100 ಕೋಟಿ ಯೋಜನೆ ಸಿದ್ಧ
ಮಂಗಳೂರು: ಆನೆಗಳು ಕಾಡಿನಿಂದ ನಾಡಿಗೆ ಬಂದು ಹಾನಿ ಮಾಡುವುದನ್ನು ತಡೆಯಲು ಆನೆ ಕಾರಿಡಾರ್ ನಿರ್ಮಾಣಕ್ಕಾಗಿ 100 ಕೋಟಿ ರೂಪಾಯಿ ವೆಚ್ಚದ ಯೋಜನೆಯೊಂದು ಸಿದ್ಧವಾಗಿದೆ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಹೈಕೋರ್ಟ್ ಸೂಚನೆಯ ಮೇರೆಗೆ ರಚಿಸಲಾದ ಕಾರ್ಯಪಡೆ ನೀಡಿದ ವರದಿಯಂತೆ ಈ ಯೋಜನೆ ಸಿದ್ಧಪಡಿಸಲಾಗಿದೆ.
ಆನೆ ಕಾರಿಡಾರ್ ವ್ಯಾಪ್ತಿಯಲ್ಲಿ ಕಂದಕ, ಬೇಲಿ ನಿರ್ಮಾಣದಂತಹ ಯೋಜನೆಗಳಿಗಾಗಿ ಉದ್ದೇಶಿತ ಹಣ ವ್ಯಯಿಸಲಾಗುವುದು, ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಅವರು ಸೋಮವಾರ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಆನೆ ಕಾರಿಡಾರ್ ವ್ಯಾಪ್ತಿಗೆ ಬರುವ 50ಕ್ಕೂ ಅಧಿಕ ಶಾಸಕರ ಸಭೆಯನ್ನು ಈಗಾಗಲೇ ಕರೆದಿದ್ದು, ಅಲ್ಲಿ ಕೇಳಿಬಂದ ಸಲಹೆಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.