ADVERTISEMENT

ಆರು ಹೊಸ ಕಾಲೇಜು ಆರಂಭಕ್ಕೆ ಸಿದ್ಧತೆ

ವೈದ್ಯಕೀಯ: 900 ಸೀಟು ಹೆಚ್ಚಳ ಸಂಭವ

ಎ.ಎಂ.ಸುರೇಶ
Published 16 ಮಾರ್ಚ್ 2014, 19:30 IST
Last Updated 16 ಮಾರ್ಚ್ 2014, 19:30 IST

ಬೆಂಗಳೂರು: ಮುಂಬರುವ ಶೈಕ್ಷಣಿಕ (2014–15) ಸಾಲಿನಿಂದ ರಾಜ್ಯದಲ್ಲಿ ಆರು ಹೊಸ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ಭರದ ಸಿದ್ಧತೆ ನಡೆದಿದೆ.

ಕಾರವಾರ, ಕೊಪ್ಪಳ, ಕೊಡಗು, ಗದಗ, ಗುಲ್ಬರ್ಗ, ಚಾಮರಾಜನಗರಕ್ಕೆ ನೂತನ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮಂಜೂರಾಗಿವೆ. ಪ್ರತಿ ಕಾಲೇಜಿನಲ್ಲಿ ತಲಾ 150 ಸೀಟುಗಳಂತೆ  ಹೆಚ್ಚುವರಿಯಾಗಿ 900 ಸೀಟುಗಳು ದೊರೆಯಲಿವೆ.

ಸಿಬ್ಬಂದಿ ನೇಮಕಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಆರೂ ಕಡೆ ಕಟ್ಟಡಗಳ ನಿರ್ಮಾಣಕ್ಕೆ ಹಣ ಮಂಜೂರಾಗಿದೆ. ಸ್ವಂತ ಕಟ್ಟಡಗಳ ನಿರ್ಮಾಣ ತಡವಾಗುತ್ತದೆ ಎಂಬ ಕಾರಣಕ್ಕೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ಆರೂ ಕಡೆ ಬೇರೆ ಬೇರೆ ಇಲಾಖೆಗಳ ಸರ್ಕಾರಿ ಕಟ್ಟಡಗಳನ್ನು ಗುರುತಿಸ­ಲಾಗಿದ್ದು, ಸದ್ಯದಲ್ಲೇ ಭೇಟಿ ನೀಡಲಿರುವ ಎಂಸಿಐ ತಂಡ ಸ್ಥಳ ಪರಿಶೀಲನೆ ನಡೆಸಲಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕಾಯಂ ಕಟ್ಟಡ ಹೊರತುಪಡಿಸಿ ಉಳಿದೆಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಇವು ಸರ್ಕಾರಿ ಕಾಲೇಜುಗಳು ಆಗಿರುವುದರಿಂದ ಸ್ವಂತ ಕಟ್ಟಡ ಹೊಂದಿರಬೇಕು ಎಂಬ ಷರತ್ತಿಗೆ ಈ ವರ್ಷದ ಮಟ್ಟಿಗೆ ವಿನಾಯಿತಿ ಸಿಗುವ ವಿಶ್ವಾಸವಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದು.

ಸೀಟು ಏರಿಕೆ: ಕಳೆದ ವರ್ಷ ಸರ್ಕಾರಿ ಕೋಟಾದಡಿ 2,501 ಸೀಟುಗಳು ಲಭ್ಯವಾಗಿದ್ದವು. ಆದರೆ,  ಈ ಬಾರಿ­ 6 ಹೊಸ ಕಾಲೇಜುಗಳ ಸ್ಥಾಪನೆಯಿಂದಾಗಿ ಸರ್ಕಾರಿ ಕೋಟಾದ ಸೀಟುಗಳ ಸಂಖ್ಯೆ 3,401ಕ್ಕೆ ಏರಲಿದೆ.

2013–14ನೇ ಸಾಲಿನಲ್ಲಿ ಎಂಬಿಬಿಎಸ್‌ನಲ್ಲಿ ಒಟ್ಟು 6,755 ಸೀಟುಗಳು ಲಭ್ಯವಿದ್ದವು. ಅಖಿಲ ಭಾರತ ಕೋಟಾದಡಿ 223, ರಾಜ್ಯ ಕೋಟಾದಡಿ 2,501 ಹಾಗೂ 4,031 ಸೀಟುಗಳು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಕೋಟಾದಡಿ ಹಂಚಿಕೆಯಾಗಿದ್ದವು.

ಸರ್ಕಾರಿ ವೈದ್ಯಕೀಯ ಕಾಲೇಜು­ಗಳಲ್ಲಿ ಸದ್ಯ ಎಂಬಿಬಿಎಸ್‌ಗೆ ವಾರ್ಷಿಕ ₨16,700 ಶುಲ್ಕವಿದೆ. 900 ಸೀಟುಗಳು ಹೆಚ್ಚುವರಿಯಾಗಿ ದೊರೆ­ಯು­ವುದರಿಂದ ಇನ್ನಷ್ಟು ಮಂದಿ ಕೈಗೆಟುಕುವ ವೆಚ್ಚದಲ್ಲಿ ವೈದ್ಯಕೀಯ ಪದವಿ ಪಡೆಯಬಹುದು.

ಅನುಪಾತ: ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಒಂದು ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯರು ಇರಬೇಕು. ಆದರೆ, ರಾಜ್ಯದಲ್ಲಿ ಪ್ರಸ್ತುತ 1,800 ಜನಸಂಖ್ಯೆಗೆ ಒಬ್ಬ ವೈದ್ಯರು ಇದ್ದಾರೆ. ಈ ಅಸಮತೋಲನವನ್ನು ಸರಿಪಡಿ­ಸುವ ಉದ್ದೇಶದಿಂದ ಹೊಸ ಕಾಲೇಜುಗಳನ್ನು ಆರಂಭಿ­ಸಲು ಸರ್ಕಾರ ಮುಂದಾಗಿದೆ.
ಪ್ರಸ್ತುತ 46 ವೈದ್ಯಕೀಯ ಕಾಲೇಜು ಗಳನ್ನು ಹೊಂದಿರುವ ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿರುವ ಖ್ಯಾತಿ ಹೊಂದಿದೆ. ಈ ವರ್ಷ ಆರು ಕಾಲೇಜುಗಳ ಸ್ಥಾಪನೆಯಿಂದಾಗಿ ಅವುಗಳ ಸಂಖ್ಯೆ 52ಕ್ಕೆ ಏರಲಿದೆ.

ಇದಲ್ಲದೆ 2014–15ನೇ ಸಾಲಿನ ಬಜೆಟ್‌ನಲ್ಲಿ ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಹಾವೇರಿ ಮತ್ತು ಯಾದಗಿರಿಯಲ್ಲಿ ಸರ್ಕಾರಿ ವೈದ್ಯಕೀಯ  ಕಾಲೇಜುಗಳನ್ನು ಆರಂಭಿಸು­ವುದಾಗಿ ಘೋಷಿಸಲಾಗಿದ್ದು, 2015–16ನೇ ಸಾಲಿನಲ್ಲಿ ಅವು ಕಾರ್ಯಾರಂಭ ಮಾಡಲಿವೆ.

ಅನುಮೋದನೆ: ಹೊಸ ಕಾಲೇಜುಗಳ ಸ್ಥಾಪನೆಗೆ ಈಗಾಗಲೇ ಆಡಳಿತಾತ್ಮಕ ಅನು­ಮೋದನೆ ನೀಡಿ ಕಟ್ಟಡ ಕಾಮಗಾರಿಗಳಿಗೆ ಹಣ ನಿಗದಿ ಮಾಡಲಾಗಿದೆ.
ಚಾಮರಾಜನಗರ ಕಾಲೇಜಿನ ಕಟ್ಟಡ ಕಾಮಗಾರಿಗೆ ₨118.56 ಕೋಟಿ, ಕೊಡಗು ಕಾಲೇಜಿಗೆ ₨136 ಕೋಟಿ, ಕೊಪ್ಪಳ, ಗುಲ್ಬರ್ಗ, ಗದಗ ಹಾಗೂ ಕಾರವಾರ ಕಾಲೇಜಿಗೆ ತಲಾ ₨ 120 ಕೋಟಿ ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಪ್ರತಿ ಕಾಲೇಜಿಗೆ ತಲಾ ₨ 29 ಕೋಟಿ ವೆಚ್ಚ ಮಾಡಲಾ­ಗುತ್ತದೆ. ಅಲ್ಲದೆ ಅಗತ್ಯ ಉಪಕರಣಗಳ ಖರೀದಿಗೆ ₨50 ಕೋಟಿ ನೀಡಲು ತೀರ್ಮಾನಿಸಲಾಗಿದೆ.

ಭಾರತೀಯ ವೈದ್ಯಕೀಯ ಮಂಡಳಿಯ(ಎಂಸಿಐ) ನಿರ್ದೇಶನದಂತೆ ಹೊಸ ಕಾಲೇಜುಗಳಿಗೆ ಐದು ವರ್ಷಗಳಲ್ಲಿ  ಪೂರ್ಣ ಪ್ರಮಾಣದ ಸೌಲಭ್ಯ ಕಲ್ಪಿಸಿ­ಕೊಡ­ಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ವೈದ್ಯ­ಕೀಯ ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಹುದ್ದೆಗಳ ಸೃಷ್ಟಿ: ಪ್ರತಿ ಕಾಲೇಜಿಗೆ ತಲಾ 105 ಬೋಧಕ ಹುದ್ದೆಗಳನ್ನು ಸೃಷ್ಟಿಸ­ಲಾಗಿದ್ದು, ಅವುಗಳ ಭರ್ತಿಗೆ ಸಂದರ್ಶನ ಪ್ರಕ್ರಿಯೆ ಪೂರ್ಣಗೊಂಡಿದೆ.  ಈಗಾಗಲೇ ನಿರ್ದೇಶಕರನ್ನು ನೇಮಕ ಮಾಡಲಾಗಿದೆ.

ಕಾರವಾರ – 330, ಕೊಪ್ಪಳ – 417, ಕೊಡಗು – 247, ಗದಗ – 393, ಗುಲ್ಬರ್ಗ – 118 ಹಾಗೂ ಚಾಮರಾಜನಗರ ವೈದ್ಯಕೀಯ ಕಾಲೇಜಿಗೆ 351 ಬೋಧಕೇತರ ಹುದ್ದೆಗಳನ್ನು ಮಂಜೂರು ಮಾಡಲಾಗಿದ್ದು, ಅವುಗಳ ಭರ್ತಿಗೆ ಲೋಕಸಭಾ ಚುನಾವಣೆ ನಂತರ ಅಧಿಸೂಚನೆ ಹೊರಡಿಸಲಾಗುತ್ತದೆ.

ಒಪ್ಪಂದ: ಹೊಸ ಕಾಲೇಜುಗಳು ಆರಂಭ-ವಾಗುವ ಸ್ಥಳಗಳಲ್ಲಿ ಇರುವ ಜಿಲ್ಲಾ ಆಸ್ಪತ್ರೆಗಳನ್ನು, ಕಾಲೇಜಿನ ಬೋಧನಾ ಆಸ್ಪತ್ರೆಯನ್ನಾಗಿ ಉಪಯೋಗಿಸಿ­ಕೊಳ್ಳಲಾಗುತ್ತದೆ. ಈ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆಯು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.