ADVERTISEMENT

‘ಆರೋಪ ಸಾಬೀತುಪಡಿಸಲು ಸವಾಲು’

ಬೆಂಬಲಕ್ಕಾಗಿ ಹಣ, ಕಾರಿನ ಆಮಿಷ ಹೇಳಿಕೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 19:30 IST
Last Updated 26 ಅಕ್ಟೋಬರ್ 2017, 19:30 IST

ಗದಗ: ‘ಶಾಮನೂರು ಶಿವಶಂಕರಪ್ಪ ಅವರು ನನ್ನ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತುಪಡಿಸಿದರೆ ಅವರು ಹೇಳಿದಂತೆ ಕೇಳುತ್ತೇನೆ. ಇಲ್ಲದಿದ್ದರೆ ಅವರು, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸವಾಲು ಹಾಕಿದರು.

ನ. 5ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಲಿಂಗಾಯತರ ಸಮಾವೇಶದ ಪೂರ್ವಭಾವಿಯಾಗಿ ಗುರುವಾರ ಗದುಗಿನ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಸಚಿವರಾದ ವಿನಯ ಕುಲಕರ್ಣಿ ಹಾಗೂ ಎಂ.ಬಿ.ಪಾಟೀಲ ಅವರು ನನಗೆ ₹ 56 ಲಕ್ಷ ಹಾಗೂ ಕಾರು ಕೊಟ್ಟಿದ್ದಾರೆ ಎಂದು ಶಾಮನೂರು ಆರೋಪಿಸಿದ್ದಾರೆ. ಈ ಆರೋಪವನ್ನು ಅವರು ಸಾಬೀತುಪಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಹೋರಾಟ ನಡೆಸುತ್ತಿರುವ ಮಠಾಧೀಶರು ಯಾವುದೇ ಆಮಿಷಕ್ಕೆ ಒಳಗಾಗಿಲ್ಲ. ಆಮಿಷಕ್ಕೆ ಒಳಗಾಗಿ ಹೋರಾಟದಿಂದ ಹಿಂದೆ ಸರಿದರೆ, ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸುವುದಿಲ್ಲ. ಇದು ನಮ್ಮ ಬದುಕಿನ ಹೋರಾಟ. ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಅಖಿಲ ಭಾರತ ಲಿಂಗಾಯತ ಮಹಾಸಭಾ ಘೋಷಣೆ ಆಗಬೇಕು, ಲಿಂಗಾಯತರು ಇಲಿಮರಿಗಳಲ್ಲ, ಹುಲಿಮರಿಗಳು ಎನ್ನುವುದನ್ನು ಸಾಬೀತುಪಡಿಸಬೇಕು’ ಎಂದರು.

ನಿಜಗುಣ ಶ್ರೀ ಆಕ್ರೋಶ: ‘ಶಾಮನೂರು ಅವರು ವೀರಶೈವ ಮಹಾಸಭಾವನ್ನು ಮಾರಾಟ ಮಾಡಿಕೊಂಡಿದ್ದಾರೆ ಎನ್ನುವ ಅನುಮಾನಗಳು ಮೂಡುತ್ತಿವೆ. ಏಕೆಂದರೆ ಆಮಿಷಕ್ಕೆ ಒಳಗಾದವರಿಂದ ಮಾತ್ರ ಇಂತಹ ಹೇಳಿಕೆ ಬರಲು ಸಾಧ್ಯ. ಅವರು ಪಂಚಾಚಾರ್ಯರ ಕೈಗೊಂಬೆ ಆಗಿದ್ದಾರೆ. ಅವರು ಹೇಳಿದಂತೆ ನುಡಿಯುತ್ತಿದ್ದಾರೆ, ನಡೆಯುತ್ತಿದ್ದಾರೆ. ಅವರು ಸ್ವಾಮೀಜಿಯವರ ಕ್ಷಮೆಯಾಚಿಸಬೇಕು. ಇದು ಇಂದಿನ ಸಭೆಯ ಹಕ್ಕೊತ್ತಾಯ’ ಎಂದು ಬೈಲೂರ ನಿಷ್ಕಲ್ಮಶ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

‘ದೊಡ್ಡವರಿಂದ ಸಣ್ಣ ಮಾತುಗಳು ಬರಬಾರದು’ ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.